ಬೆಂಗಳೂರು: ಸಂಚಾರಕ್ಕೆ ದಟ್ಟಣೆ ನಿವಾರಣೆಗೆ ಮತ್ತೊಂದು ಡಬ್ಬಲ್ ಡೆಕ್ಕರ್ ಪ್ಲೈಓವರ್ ನಿರ್ಮಾಣವಾಗಲಿದೆ. ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಅತಿ ಉದ್ದದ ಡಬ್ಬಲ್ ಡೆಕ್ಕರ್ ಪ್ಲೈಓವರ್ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನೂತನ ಮೆಟ್ರೋ ಮಾರ್ಗಗಳು ಹೋಗುವ ಮಾರ್ಗದಲ್ಲಿ ಸುಮಾರು 40 ಕಿ.ಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ಮುಂದಿನ 30-40 ವರ್ಷದ ಭವಿಷ್ಯವನ್ನು ಇಟ್ಟುಕೊಂಡು ಈ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ನೂತನ ಮೆಟ್ರೋ ಮಾರ್ಗಗಳಾದ ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ, ಹೊಸಹಳ್ಳಿಯಿಂದ ಕಡಬಗೆರೆವರೆಗೂ ಡಬ್ಬಲ್ ಡೆಕ್ಕರ್ ಪ್ಲೈಓವರ್ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಮೆಟ್ರೋ ಪೇಸ್-3 ಅಡಿಯಲ್ಲಿ ರಸ್ತೆ ಫ್ಲೈಓವರ್ ಮತ್ತು ಮೆಟ್ರೋ ಮಾರ್ಗ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈ ಯೋಜನೆಯ ಅಂದಾಜು ವೆಚ್ಚ 9 ಸಾವಿರ ಕೋಟಿಯಾಗಲಿದೆ ಎಂದು ಡಿಕೆಶಿ ಮಾಹಿತಿ ಹಂಚಿಕೊಂಡಿದ್ದಾರೆ.

