Bengaluru CityDistrictsKarnatakaLatestMain Post

ಟಿಪ್ಪು ವಿವಾದವನ್ನು ಬೈ ಎಲೆಕ್ಷನ್‍ಗೆ ಬಳಸಿಕೊಳ್ಳುವ ಅಗತ್ಯವಿಲ್ಲ- ಸಿ.ಟಿ ರವಿ

ಬೆಂಗಳೂರು: ಟಿಪ್ಪು ಸುಲ್ತಾನ್ ಇತಿಹಾಸವನ್ನು ಅಧ್ಯಯನ ಮಾಡಿದರೆ ಯಾರು ಮತಾಂಧರು ಅನ್ನೋದು ತಿಳಿಯುತ್ತದೆ. ಬಿಜೆಪಿಗೆ ಟಿಪ್ಪು ವಿವಾದವನ್ನು ಬೈ ಎಲೆಕ್ಷನ್‍ಗೆ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಒಡೆದು ಆಳುವ ನೀತಿ ಪಾಲಿಸುತ್ತಿದೆ. 72 ವರ್ಷದಿಂದ ಆಚರಣೆ ಮಾಡಲಾಗದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿಯೇ ಜಾರಿಗೆ ತಂದಿದೆ. ಇಷ್ಟು ವರ್ಷಗಳ ಕಾಲ ನಾಡಧ್ವಜದ ಬಗ್ಗೆಯೂ ಇಲ್ಲದ ಕಾಳಜಿ ಚುನಾವಣೆಗೆ ಒಂದು ವರ್ಷವಿದ್ದಾಗ ವಿವಾದ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಲಿಂಗಾಯತ-ವೀರಶೈವ ವಿವಾದವನ್ನು ಚುನಾವಣಾ ವೇಳೆಯೇ ಶುರುಮಾಡಿದೆ. ಸಿದ್ದರಾಮಯ್ಯನವರೇ ಒಡೆದು ಆಳುವ ವಿಚಾರದಲ್ಲಿ ಕಿಂಗ್ ಆ್ಯಂಡ್ ಕಿಂಗ್ ಮೇಕರ್ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಾರೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿದ್ದರು ಅಂತಾರೆ. ಬ್ರಿಟಿಷರ ವಿರುದ್ಧ ಡಚ್ಚರು, ಪೋರ್ಚುಗೀಸರು ಸಹ ಹೋರಾಟ ಮಾಡಿದ್ದರು. ಹಾಗಾದರೆ ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾ ಎಂದು ಸಿಟಿ ರವಿ ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಬಿಜೆಪಿಯವರನ್ನು ಮತಾಂಧರು ಎಂದು ಹೇಳುತ್ತಾರೆ. ಮತಾಂಧನಾದ ಟಿಪ್ಪು ಪರ ಇರುವ ಸಿದ್ದರಾಮಯ್ಯ ಅವರೇ ಮತಾಂಧರು ಎಂದು ಗರಂ ಆದರು.

ಬಿಜೆಪಿ ಸರ್ಕಾರ ಸತ್ತೋಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಸರ್ಕಾರ ಸತ್ತ ಬಳಿಕವೇ ನಮ್ಮ ಸರ್ಕಾರ ಹುಟ್ಟಿಕೊಂಡಿದೆ. ಕಾಂಗ್ರೆಸ್ ಈಗ ಸತ್ತೋಗಿರುವ ಪಕ್ಷ. ಹಾಗಾಗಿ ಅವರು ಸಾವಿನ ಬಗ್ಗೆಯೇ ಮಾತನಾಡುತ್ತಾರೆ. ನೆರೆ ಪರಿಹಾರವಾಗಿ 50 ಸಾವಿರ 1 ಲಕ್ಷ ಹಣವನ್ನು ಯಾರು ಕೊಟ್ಟಿದ್ದು?. ಸತ್ತಿರುವವರು ಪರಿಹಾರ ಕೋಡೊಕೆ ಆಗುತ್ತಾ?, ಹತಾಶಾ ಮನೋಭಾವದಿಂದ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ಹೆಚ್‍ಡಿಕೆ ಬಿಜೆಪಿಯತ್ತ ಒಲವು ತೋರಿರುವ ವಿಚಾರ ಸಂಬಂಧ ಮಾತನಾಡಿ, ಹೆಚ್‍ಡಿಕೆಯವರದ್ದು ಪಿತ್ರಾರ್ಜಿತ ರಾಜಕೀಯ. ನಮ್ಮದು ಸ್ವಯಾರ್ಜಿತ ರಾಜಕೀಯ. ಅವರು ಯಾವಾಗ, ಯಾವ ಉದ್ದೇಶದ ದಾಳ ಉರುಳಿಸುತ್ತಾರೋ ಗೊತ್ತಿಲ್ಲ. ಪಿತ್ರಾರ್ಜಿತ ರಾಜಕೀಯದಲ್ಲಿ ಎಲ್ಲೋ ದಾಳ ಇಟ್ಟುಕೊಂಡು ಎಲ್ಲಿ ಬೇಕಾದರೂ ದಾಳಿ ಉರುಳಿಸಬಹುದು. ಅವರು ಯಾವ ಉದ್ದೇಶದಿಂದ ಸರ್ಕಾರ ಬೀಳಲು ಬಿಡಲ್ಲ ಎಂದು ಹೇಳಿದ್ದಾರೋ ಅದರ ಹಿನ್ನೆಲೆ ಗೊತ್ತಿಲ್ಲ. ನಾವು ಕೂಡ ಅದರ ರಾಜಕೀಯ ಲಾಭ ಪಡೆಯುವ ಉತ್ಸುಕದಲಿದ್ದೇವೆ. ಹೀಗಾಗಿ ಆ ಬಗ್ಗೆ ಏನೂ ಹೇಳಲ್ಲ ಎಂದರು.

YouTube video

Leave a Reply

Your email address will not be published. Required fields are marked *

Back to top button