ಆನೇಕಲ್: ದಿನ ಪತ್ರಿಕೆ ಸರಬರಾಜು ಮಾಡುತ್ತಿದ್ದ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಖಾಸಗಿ ದಿನ ಪತ್ರಿಕೆಯ ಏಜೆಂಟ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಪ್ಪ ಗೇಟ್ ಬಳಿ ನಡೆದಿದೆ.
ಕೃಷ್ಣ (26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೃಷ್ಣ ಅವರು ರಾಜ್ಯದ ಖಾಸಗಿ ದಿನಪತ್ರಿಕೆಯೊಂದರ ಏಜೆಂಟ್ ಆಗಿದ್ದು, ಪ್ರತಿನಿತ್ಯ ಬೆಂಗಳೂರಿನಿಂದ ಆನೇಕಲ್ ಪಟ್ಟಣಕ್ಕೆ ಟಾಟಾ ಏಸ್ ವಾಹನದ ಮೂಲಕ ದಿನಪತ್ರಿಕೆ ಸರಬರಾಜು ಮಾಡುತ್ತಿದ್ದರು.
ಎಂದಿನಂತೆ ಇಂದು ಸಹ ದಿನಪತ್ರಿಕೆ ಸರಬರಾಜು ಮಾಡಲು ಬನ್ನೇರುಘಟ್ಟ ಕಡೆಯಿಂದ ಆನೇಕಲ್ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಕೊಪ್ಪ ಗೇಟ್ ಬಳಿ ಟಿಪ್ಪರ್ ಲಾರಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಕೃಷ್ಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕೃಷ್ಣ ಅವರಿಗೆ ಒಂದು ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು.
ಈ ಸಂಬಂಧ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಟಿಪ್ಪರ್ ವಶಕ್ಕೆ ಪಡೆದಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.