ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನಲ್ಲಿ ನಡೆದಿದೆ.
ಸಹಿದ್ ಖಾನ್ (17), ಜಾಕೀರ್ ಖಾನ್(14) ಹಾಗೂ ಮರಸೂರು ಗ್ರಾಮದ ರೋಷನ್(14) ಮೃತ ವಿದ್ಯಾರ್ಥಿಗಳು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಿಂಗಿಪುರ ಕೆರೆಯಲ್ಲಿ ಸಹಿದ್ ಖಾನ್ ಹಾಗೂ ಜಾಕೀರ್ ಖಾನ್ ನಿನ್ನೆ ಸಂಜೆ ಈಜಲು ತೆರಳಿದ್ದರು. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ವಿದ್ಯಾರ್ಥಿಗಳ ಮೃತ ದೇಹಕ್ಕೆ ಹುಡುಕಾಟ ನಡೆಸಿದ್ದರು. ಆದರೆ ರಾತ್ರಿ ಕಳೆದರೂ ಮೃತ ದೇಹಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ನುರಿತ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದಿದ್ದಾರೆ.
ಈ ಪ್ರಕರಣ ಮಾಸುವ ಮುನ್ನವೇ ಆನೇಕಲ್ ಪಟ್ಟಣಕ್ಕೆ ಸಮೀಪವಿರುವ ಮರಸೂರು ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ರೋಷನ್ ಸಾವನ್ನಪ್ಪಿದ್ದಾನೆ. ಕೆರೆಯಲ್ಲಿದ್ದ ಹೂಳಿನಲ್ಲಿ ಕಾಲು ಸಿಲುಕಿದ್ದರಿಂದ ಈಜಲು ಸಾಧ್ಯವಾಗದೇ ರೋಷನ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಸಿಟಿ ಪೊಲೀಸರು ನುರಿತ ಈಜುಗಾರರನ್ನು ಕರೆಸಿ, ವಿದ್ಯಾರ್ಥಿಯ ಶವವನ್ನು ಮೇಲಕ್ಕೆತ್ತಿದ್ದಾರೆ.
ಈ ವೇಳೆ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ರೋಷನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.