ಬೆಂಗಳೂರು: ಇಲ್ಲಿನ ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವನ್ನಪ್ಪಿದ್ದ ಕೇಸ್ ಸಂಬಂಧ ಹೊಸ ವಿಚಾರಗಳು ಬಯಲಾಗುತ್ತಿವೆ. ಮೃತ ಶರ್ಮಿಳಾ ಅನ್ನು ಒಂದೇ ಸಲ ನೋಡಿದ್ದಕ್ಕೆ ಆರೋಪಿಗೆ ಲವ್ ಶುರುವಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೇರಳ ಮೂಲದ ಆರೋಪಿ ಕರ್ನಲ್ ಕುರಯ್ (18) ಶರ್ಮಿಳಾ ಅನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮೃತ ಶರ್ಮಿಳಾ ಮೂಲತಃ ಮಂಗಳೂರಿನವರಾಗಿದ್ದು, ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟೆಕ್ಕಿ ಕೊಲೆ ಕೇಸ್ – ಶರ್ಮಿಳಾ ಮೊಬೈಲ್ ನೀಡಿದ ಸುಳಿವಿನಿಂದ ಆರೋಪಿ ಬಂಧನ
ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ದಾಖಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆ ಎನ್ನುವ ರೀತಿ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಶರ್ಮಿಳಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಮೊಬೈಲ್ ಆನ್ ಆಗಿತ್ತು. ಈ ವೇಳೆ ಅನುಮಾನಗೊಂಡ ಪೊಲೀಸರ ಬಲೆಗೆ ಆರೋಪಿ ಸಿಕ್ಕಿಬಿದ್ದಿದ್ದ. ಈ ವೇಳೆ ಕೆಲ ವಿಚಾರಗಳನ್ನು ತಿಳಿಸಿದ್ದಾನೆ.
ಲವ್ ಶುರುವಾಗಿದ್ದು ಹೇಗೆ?
ಮೃತ ಶರ್ಮಿಳಾಗೆ ಗಿಡ, ಮರಗಳೆಂದರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಮನೆಯ ಮುಂದೆ ಹತ್ತಾರು ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಿದ್ದಳು. ಬೆಳಗ್ಗೆ ಹಾಗೂ ಸಂಜೆ ಆ ಗಿಡಗಳಿಗೆ ನೀರು ಹಾಕಲು ಹೊರಬರ್ತಿದ್ದ ಶರ್ಮಿಳಾ ಶಾಟ್ಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಆ ಸಮಯದಲ್ಲಿ ಇತ್ತ ಆರೋಪಿ ಕರ್ನಲ್ ಕೂಡ ಟೆರೇಸ್‌ನಲ್ಲಿ ಓದಿಕೊಳ್ಳಲು ಬರುತ್ತಿದ್ದ. ಒಂದು ದಿನ ಆರೋಪಿಯನ್ನು ನೋಡಿ ಶರ್ಮಿಳಾ ಸ್ಮೈಲ್ ಕೊಟ್ಟಿದ್ದಳು. ಅಷ್ಟಕ್ಕೆ ಇಲ್ಲಸಲ್ಲದ ಆಸೆ ಬೆಳೆಸಿಕೊಂಡಿದ್ದ. ಪ್ರತಿದಿನ ಓದಿಕೊಳ್ಳುವ ನೆಪದಲ್ಲಿ ಶರ್ಮಿಳಾನ್ನು ನೋಡೊಕೆ ಬರುತ್ತಿದ್ದ. ಕಳೆದ ಎರಡು ತಿಂಗಳಲ್ಲಿ ಶರ್ಮಿಳಾ ಬಗ್ಗೆ ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದ.
ಘಟನೆ ನಡೆದ ದಿನ ಶರ್ಮಿಳಾ ಜೊತೆಗಿದ್ದ ಸ್ನೇಹಿತೆ ಊರಿಗೆ ಹೋಗಿದ್ದಳು. ಇದೇ ಸರಿಯಾದ ಸಮಯ ಎಂದುಕೊಂಡು ಮನೆಯ ಟೆರೇಸ್ ಮೂಲಕ ಶರ್ಮಿಳಾ ಪ್ಲಾಟ್‌ಗೆ ಬಂದಿದ್ದ. ಆಗಷ್ಟೇ ಮನೆಗೆ ಬಂದಿದ್ದವಳು ಹಾಲು ಕಾಯೋಕೆ ಇಟ್ಟು, ಫೋನ್ ನೋಡುತ್ತಿದ್ದಳು. ಈ ವೇಳೆ ಏಕಾಏಕಿ ಹಿಂದಿನಿಂದ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿ, ಎಳೆದಾಡಿದ್ದ. ಆಗ ಶರ್ಮಿಳಾ ತಲೆ, ಹಣೆಭಾಗಕ್ಕೆ ಗಾಯವಾಗಿ ಕೆಳಗೆ ಬಿದ್ದಿದ್ದಳು. ಈ ವೇಳೆ ತಲೆದಿಂಬಿನಿಂದ ಒತ್ತಿ ಹಿಡಿದಿದ್ದ. ಯಾವಾಗ ಶರ್ಮಿಳಾ ಅರೆಪ್ರಜ್ಞಾವಸ್ಥೆಯಲ್ಲಿ ಕೆಳಗೆ ಬೀಳುತ್ತಾಳೋ ಆಗ ಅವಳು ಸತ್ತು ಹೋಗಿದ್ದಾಳೆ ಎಂದು ಭಾವಿಸಿ, ರಕ್ತದ ಕಲೆ ಆಗಿದ್ದ ತಲೆದಿಂಬಿಗೆ ಬೆಂಕಿ ಹಚ್ಚಿ, ಕೊನೆಗೆ ಶರ್ಮಿಳಾ ಯಾರಿಗಾದರೂ ಕರೆ ಮಾಡುತ್ತಾಳೆ ಎಂದುಕೊಂಡು ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದ. ಕೊನೆಗೆ ಅದೇ ಮೊಬೈಲ್‌ನ ಸುಳಿವಿನಿಂದಲೇ ಪೊಲೀಸರ ಬಲೆಗೆ ಬಿದ್ದ.
ಘಟನೆ ನಡೆದ ದಿನ ಆಗಿದ್ದೇನು?
ಜ.3ರ ರಾತ್ರಿ ಘಟನೆ ನಡೆದಿದ್ದು, ಜ.5ರಂದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲ್ಯಾಟ್‌ನ ರೂಮ್‌ವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತ್ತು. ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು.ಇದನ್ನೂ ಓದಿ: ಉಸಿರುಗಟ್ಟಿ ಟೆಕ್ಕಿ ಸಾವು ಕೇಸ್‌ಗೆ ಟ್ವಿಸ್ಟ್ – ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವಕನಿಂದ ಹತ್ಯೆಯಾದ ಶರ್ಮಿಳಾ


