ಬೆಂಗಳೂರು: ತೆಲಂಗಾಣ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದ ಬೆನ್ನಲ್ಲೇ ಸಿಲಿಕಾನ್ ಸಿಟಿಯ ವಿವಿಧ ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳು ‘ವರ್ಕ್ ಫ್ರಮ್ ಹೋಂ’ ಮಂತ್ರ ಜಪಿಸುತ್ತಿದ್ದಾರೆ.
ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಸುದ್ದಿ ತಿಳಿದ ಬಳಿಕ ಐಟಿ ಕಂಪನಿಗಳಲ್ಲಿ ‘ವರ್ಕ್ ಪ್ರಮ್ ಹೋಂ’ ಟ್ರೆಂಡ್ ಶುರುವಾಗಿದೆ. ಕೆಲವು ಐಟಿ ಕಂಪನಿಗಳು ತಮ್ಮ ಉದ್ಯೊಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಇನ್ನೂ ಕೆಲವು ಕಂಪನಿ ಉದ್ಯೋಗಿಗಳು ಸ್ವತಃ ತಾವಾಗಿಯೇ ಮುಂದೆ ಬಂದು, ನಾವು ಮನೆಯಿಂದಲೇ ಕೆಲಸ ಮಾಡುತ್ತೇವೆ. ನಮಗೆ ಅವಕಾಶ ನೀಡಿ ಎಂದು ಮೇಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇದು ಐಟಿ ಕಂಪನಿಗಳ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ.
Advertisement
Advertisement
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಗೆ ಮಾರಣಾಂತಿಕ ಕೊರೊನಾ ವೈರಸ್ ತಗುಲಿರುವ ಕಾರಣ ಐಟಿ ಉದ್ಯೋಗಿಗಳು ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ. ಸೋಂಕಿತ ಟೆಕ್ಕಿ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಇನ್ನೂ ಆರೋಗ್ಯ ಇಲಾಖೆ ಬಹಿರಂಗ ಪಡಿಸಿಲ್ಲ. ಇದರಿಂದ ಟೆಕ್ಕಿಗಳು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ನಾವು ಕಂಪನಿಗೆ ಬಂದು ಕೆಲಸ ಮಾಡಲ್ಲ, ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಕಂಪನಿಗೆ ತಿಳಿಸುತ್ತಿದ್ದಾರೆ. ಜೊತೆಗೆ ಹಲವರು ಕೊರೊನಾ ಭೀತಿಗೆ ರಜೆ ಪಡೆಯುತ್ತಿದ್ದಾರೆ.
Advertisement
Advertisement
ಇತ್ತ ರಜೆ ಸಿಗದವರು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ. ಆದ್ದರಿಂದ ಐಟಿ ಕಂಪನಿಗಳು ಇನ್ನೂ ಮೂನಾಲ್ಕು ದಿನ ಪರಿಸ್ಥಿತಿ ಹೇಗಿರುತ್ತೆ ಎಂದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ಟೆಕ್ಕಿಯೊಬ್ಬರು ಪ್ರತಿಕ್ರಿಯಿಸಿ, ಕಂಪನಿಯಲ್ಲಿ ಯಾರಿಗಾದರು ಶೆಕ್‍ಹ್ಯಾಂಡ್ ಕೊಡಲು, ಲಿಫ್ಟ್ ಬಟನ್, ವಾಷ್ ರೂಮಿನಲ್ಲಿ ವಸ್ತುಗಳನ್ನು ಮುಟ್ಟಲು ಭಯ ಆಗುತ್ತೆ. ಕೊರೊನಾ ಬಗ್ಗೆ ಕೇಳಿದಾಗಿನಿಂದ ಸದಾ ನನ್ನ ಜೊತೆ ಸ್ಯಾನಿಟೈಸರ್ ಇಟ್ಟುಕೊಂಡೇ ತಿರುಗುತ್ತಿದ್ದೇನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಿ ಕಾನ್ಫರೆನ್ಸ್‌ಗಳು ರದ್ದು:
ಹೌದು. ಕೊರೊನಾ ವೈರಸ್ ಭೀತಿಗೆ ಹಲವು ಐಟಿ ಕಂಪನಿಗಳು ವಿದೇಶಿ ಕಾನ್ಫರೆನ್ಸ್‌ಗಳನ್ನು ರದ್ದುಗೊಳಿಸಿವೆ. ಅದೇ ರೀತಿ ವಿದೇಶದಿಂದ ಬರಬೇಕಿದ್ದ ಪ್ರತಿನಿಧಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಚೀನಾ, ಸಿಂಗಪುರದಲ್ಲಿ ಕೊರೊನಾ ಎಫೆಕ್ಟ್ ನಿಂದ ಐಟಿ ಉದ್ಯಮ ಬಿದ್ದಿದೆ. ಇದರಿಂದ ಸಾಫ್ಟ್‌ವೇರ್‌ಗಳ ರಫ್ತಿನಲ್ಲೂ ವ್ಯತ್ಯಾಸವಾಗುತ್ತಿದೆ.
ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
ಟೆಕ್ಕಿ ಫೆ. 17 ರಂದು ದುಬೈಗೆ ಕೆಲಸದ ಸಂಬಂಧ ತೆರಳಿದ್ದರು. ಅಲ್ಲಿ ಹಾಕಾಂಗ್ ಗೆಳೆಯರ ಜೊತೆ ಎರಡು ಮೂರು ದಿನ ಕೆಲಸ ಮಾಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದುಬೈನಿಂದ ಫೆ.20ರಂದು ಬೆಂಗಳೂರಿಗೆ ಬಂದವರಿಗೆ ಜ್ವರ ಕಾಣಿಸಿಕೊಂಡಿತ್ತು. ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ ಟೆಕ್ಕಿ ನಗರದ ವಿವಿಧೆಡೆ ಓಡಾಡಿದ್ದರು. ಫೆ.22 ರಂದು ಬಸ್ ಮೂಲಕ ಹೈದರಾಬಾದ್‍ಗೆ ತೆರಳಿ ಸಿಕಂದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಇರುವುದು ಖಚಿತವಾಗಿತ್ತು.
ಟೆಕ್ಕಿ ಈಗ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಈಟಾಲ ರಾಜೇಂದ್ರ ತಿಳಿಸಿದ್ದಾರೆ. ಟೆಕ್ಕಿಯ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಟೆಕ್ಕಿ ಸಿಕಂದರಾಬಾದ್‍ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‍ನ ಅಪೊಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟು 80 ಮಂದಿಯ ಮೇಲೆ ನಿಗಾ ಇಡಲಾಗಿದ್ದು ತೆಲಂಗಾಣ ಸರ್ಕಾರ ಈಗಾಗಲೇ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.