ಮುರುಳೀಧರ್ ಎಚ್.ಸಿ
ಅವಳ ಹೊಟ್ಟೆಯಲ್ಲಿ ಕಂದಮ್ಮ ಕುಡಿಯೊಡೆಯುವಾಗ ಒಹೋ ಅದೆಂಥ ಸಂಭ್ರಮ. ಬದುಕು ಸಾರ್ಥಕವಾಯ್ತು ಅಂತಾ ತನ್ನ ತುಂಬು ಹೊಟ್ಟೆಯನ್ನು ಅದೆಷ್ಟು ಬಾರಿ ಸವರಿ ಖುಷಿಪಟ್ಟಿತ್ತೋ ಆ ತಾಯಿ ಜೀವ. ಇನ್ನೇನು ಯಾತನೆಯ ನೋವಿನ ಮಧ್ಯೆ ಅವಳ ಮಡಿಲಲ್ಲಿ ಕಂದಮ್ಮ ಕಿಲಕಿಲನೆ ನಗುತ್ತಿದ್ಲು. ನೋಡನೋಡುತ್ತಿದ್ದಂತೆ ಅಂಬೆಗಾಲಿಡುತ್ತ ಅಮ್ಮನ ಅಪ್ಪಿಕೊಳ್ಳುವ ಪುಟ್ಟ ಪುಟ್ಟ ಕೈಗೆ ಆ ಅಮ್ಮ ಅದೆಷ್ಟು ಬಾರಿ ಮುತ್ತಿಟ್ಟಿದ್ದಳು.
Advertisement
ಚಂದಮಾಮನ ತೋರಿಸಿ ತುತ್ತು ತಿನ್ನಿಸಿದ ಮಗಳು ದೊಡ್ಡವಳಾದ್ಲು. ಅಮ್ಮನ ಕನಸಿಗೆ ರೆಕ್ಕೆಪುಕ್ಕ ಬರುವ ಸಮಯ. ಆದರೆ ಮಗಳು, ಅಮ್ಮ ನಿರಮ್ಮಳವಾಗಿ ಸವಿನಿದ್ದೆಯ ಸಮಯದಲ್ಲಿದ್ಲು ಬಹುಶಃ ಅಮ್ಮನ ಕನವರಿಕೆಯಲ್ಲೂ ಮಗಳ ಭವಿಷ್ಯದ ಕನಸಿತ್ತೇನೋ? ಆದ್ರೇ ಅದೇ ನಿದ್ದೆಯಲ್ಲಿದ್ದಾಗ ಅಮ್ಮನ ಎದೆಗೆ ಮಗಳು ಚಾಕು ಚುಚ್ಚೇಬಿಟ್ಲು ನೋಡಿ. ಉಫ್ ಅಮ್ಮಂಗೆ ಮಗಳು ಚಾಕು ಚುಚ್ಚೋದು ಕಂಡಿತಾ? ಚಾಕು ಚುಚ್ಚಿದಕ್ಕೆ ಅಮ್ಮ ರಕ್ತಕಾರಿ ಸತ್ಲಾ? ಅಥವಾ ಮಗಳು ಚಾಕು ಚುಚ್ಚುತ್ತಾ ಇರುವ ರಕ್ತಸಿಕ್ತ ಚಾಕುವನ್ನೇ ನೋಡಿ ತಾಯಿ ಗೋಣುಚೆಲ್ಲಿದ್ಲಾ? ಗೊತ್ತಿಲ್ಲ. ಆದ್ರೇ ಬೆಂಗಳೂರಿನ ಕೆಆರ್ ಪುರಂನಲ್ಲಿ ಅಮ್ಮನ ಕೊಂದ ಕೊಲೆಗಾತಿ ಮಗಳ ಕಥೆ ಇಡೀ ರಾಜ್ಯವನ್ನು ಕಣ್ಣೀರಲ್ಲಿ ಕೈತೊಳೆಸುವಂತೆ ಮಾಡಿತ್ತು. ಥೂ ಅಮ್ಮ ತನ್ನ ಮಗಳಿಗೆ ಅದೆಷ್ಟು ಚಂದದ ಹೆಸ್ರು ಇಟ್ಟಿದ್ಲು ನೋಡಿ ಅಮೃತಾ ಅಂತಾ. ಆದ್ರೇ ತಾಯಿಯ ಬದುಕಿಗೆ ವಿಷವಾಗಿ ಬಿಟ್ಲು ಪಾಪಿ. ಅಕ್ಕಪಕ್ಕದ ಮನೆಯವರೆಲ್ಲ ಕಣ್ಣೀರಾದ್ರೂ ತನ್ನ ತಾಯಿಯನ್ನೇ ಬಿಗಿದಪ್ಪಿದ ಅದೇ ಕೈಯಿಂದ ಚಾಕು ಹಿಡಿದು ಕೊಲೆ ಮಾಡಿದ ಅಮೃತಾ ಕಣ್ಣಲ್ಲಿ ಕಣ್ಣೀರೆ ಇರಲಿಲ್ಲ. ಬಿಡಿ ಅವಳು ಮನುಷ್ಯಳಾಗೋಕೆ ಯೋಗ್ಯಳು ಅಲ್ಲ.
Advertisement
Advertisement
ನವ ಮಾಸ ಹೊತ್ತು ಹೆತ್ತವಳಿಗೆ ಆಕೆ ಕೊಟ್ಟಿದ್ದು ಮಾತ್ರ ಅದೊಂದು ದೊಡ್ಡ ಬಹುಮಾನ, ಅಂಬೆಗಾಲು ಇಡುವ ಮಗುವಿನ ಕಾಲಿಗೆ ಮುತ್ತಿಟ್ಟವಳ ಬಾಯಿ ಕಟ್ಟಿದ್ಲು. ಮಗಳೇ ಅನ್ನೋ ಪದಕ್ಕೆ ಅವಳು ಅನ್ವರ್ಥವೇ ಆಗಿಬಿಟ್ಟಳು. ಇದು ಕೋಮಲ ಹೃದಯವನ್ನೂ ಕುದಿಯವಂತೆ ಮಾಡಿತ್ತು. ಹೆಣ್ಣು ಕ್ಷಮಯಾಧರಿತ್ರಿ, ರೂಪೇಶು ಮಾತೇ ಅಂತೆಲ್ಲಾ ಕರೆಯೋ ಹೆಣ್ಣು ಜೀವ ಹೆಮ್ಮಾರಿಯಾದ್ರೆ ಏನುಬೇಕಾದ್ರೂ ಆಗಿ ಹೋಗುತ್ತೆ. ಹೆಣ್ಣು ಆದಿ ಅಂತ್ಯವೂ ಆಗಿರ್ತಾಳೆ. ಆದ್ರೆ, ಈ ಹೆಣ್ಣು ಆದಿಯಾಗಿದ್ದ ತಾಯಿಗೆ ಅಂತ್ಯವನ್ನು ಹಾಡಿದ್ಲು.
Advertisement
ಅಮೃತಾ ಹೆಸರೇ ಹೇಳುವಂತೆ ಅದೊಂದು ಕಲ್ಮಶವೇ ಇಲ್ಲದ ಜೀವ ಆಗಿರ್ಬೇಕಿತ್ತು. ಆದ್ರೆ, ಈ ಅಮೃತಾ ಹೆಸರಿಗೆ ಅನ್ವರ್ಥಳಾಗಿದ್ದಾಳೆ. ತಾಯಿಯನ್ನು ಅದ್ಯಾವ ಕಾರಣಕ್ಕೆ ಚಾಕು ಚುಚ್ಚಿ ಕೊಂದ್ಲೋ ದೇವರೇ ಬಲ್ಲ. ಟೆಕ್ಕಿ ಅಮೃತಾಗೆ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ಇತ್ತು. ಬದುಕನ್ನು ಕರ್ಪೂರದಂತೆ ಮಗಳಿಗಾಗಿ ಸವೆಸಿದ ತಾಯಿಯ ಭರಪೂರ ಪ್ರೀತಿಯಿತ್ತು. ಸದಾ ಕಾಟ ಕೊಟ್ಟು ಜಗತ್ತಿನಲ್ಲಿ ಅತ್ಯಂತ ಪ್ರೀತಿ ಕೊಡುವ ಪುಟ್ಟ ತಮ್ಮನೂ ಇದ್ದ. ಆದ್ರೇ ಅವತ್ತು ಅದೇನಾಗಿತ್ತೋ ಈ ಪಾಪಿಗೆ ನಿದ್ದೆ ಮಂಪರಿನಲ್ಲಿದ್ದ ತಾಯಿಯ ಎದೆಗೆ ಚಾಕು ಚುಚ್ಚಿದ್ಲು. ಇನ್ನು ತನ್ನೊಂದಿಗೆ ಅಕ್ಕ ಅಕ್ಕ ಅಂತಾ ಅಮೃತಾಳಲ್ಲಿ ತಾಯಿಯನ್ನು ಕಂಡ ಆ ತಮ್ಮನ ದೇಹದಲ್ಲಿಯೂ ರಕ್ತ ಕಾಣೋಕೆ ಹಪಹಪಿಸಿದ್ಲು ರಾಕ್ಷಸಿ. ತಮ್ಮನಿಗೆ ಚಾಕು ಚುಚ್ಚೋಕೆ ಶುರು ಮಾಡಿದ್ಲು. ಆ ಹುಡ್ಗನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ. ಜಸ್ಟ್ ಕೊಲೆಯಿಂದ ತಪ್ಪಿಸಿಕೊಂಡ. ಹಿಂಗೆ ಒಂದ್ ಕೊಲೆ, ಒಂದ್ ಕೊಲೆ ಯತ್ನ ಮಾಡಿ ಅದೆಷ್ಟು ತಣ್ಣಗೆ ಪ್ರಿಯಕರನ ಬೈಕ್‍ನ್ನು ಏರಿದ್ಲು ಅಂದ್ರೆ ಇನ್‍ಫ್ಯಾಕ್ಟ್ ಅದೇ ಬೈಕ್‍ನ್ನು ಏರಿದ್ದಕ್ಕೆ ಆಕೆ ತಗ್ಲಾಕ್ಕೊಂಡ್ಲು. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಹಂಗಂಗೆ ಸೆರೆಯಾಗಿತ್ತು. ಒಂದ್‍ಕ್ಷಣ ಖಾಕಿ ತೊಟ್ಟವರು ಕೂಡ ಹೊಟ್ಟೆಯಲ್ಲಿ ಹುಟ್ಟಿದ ಮಗಳೇ ಕೊಲೆ ಮಾಡಿದ್ದಾಳೆ ಅಂತಾ ನಂಬೋಕೆ ತಯಾರಿರಲಿಲ್ಲ. ಆದರೆ ಅದ್ಯಾವಾಗ ತಮ್ಮ ಅಕ್ಕನ ಪಾಪದ ಕೃತ್ಯವನ್ನು ಇಂಚಿಂಚಾಗಿ ಹೇಳೋಕೆ ಶುರುಮಾಡಿದ್ನೋ ಖಡಕ್ ಖಾಕಿ ಕಣ್ಣಲ್ಲಿ ಕೂಡ ಆ ತಾಯಿಯ ಕೊನೆಯ ಕ್ಷಣದ ಕೊಸರಾಟ ನೆನೆಸಿ ಕಣ್ಣ ನೀರನ್ನು ಮರೆಮಾಚಿದ್ರು. ಹಾ ಪ್ರಿಯಕರನ ಸೊಂಟ ಹಿಡಿದು ಬೈಕ್ ಏರಿದ ಈ ಕಿರಾತಕಿ ಹೋಗಿದ್ದೆಲ್ಲಿ ಗೊತ್ತಾ ಸೀದಾ ಅಂಡಮಾನ್‍ಗೆ. ಅಸಲಿಗೆ ಅಮ್ಮನ ಕೊಲೆ ಮಾಡಿ ಬೆಚ್ಚಗೆ ಪ್ರಿಯಕರನ ಜೊತೆ ಕೂತವಳಿಗೆ ಸಣ್ಣ ನೋವು ಕಾಡಿಲ್ವಾ ಅಂತಾ ಖಾಕಿ ಕೂಡ ಅದೆಷ್ಟೋ ಬಾರಿ ಆಕೆಯ ಕೈಗೆ ಕೋಳ ಹಾಕಿದಾಗ ಪ್ರಶ್ನಿಸಿದೆ.
ಇನ್ನು ಪ್ರಿಯಕರ. ಆತನಿಗೆ ತನ್ನ ಮನದನ್ನೆಯ ಸ್ಕೆಚ್ ಮೊದಲೇ ಗೊತ್ತಿತ್ತಾ ಗೊತ್ತಿಲ್ವಾ. ಪೊಲೀಸರಿಗೆ ಇನ್ನೂ ಕನ್‍ಫ್ಯೂಶನ್..! ಅಂಡಮಾನ್‍ಗೆ ಟ್ರಿಪ್ ಹೋಗಿದ್ದ ಅಮೃತಾಗಳಿಗೆ ಒದೆಕೊಟ್ಟು ಪೊಲೀಸರು ಎತ್ತಾಕ್ಕೊಂಡು ಬಂದ್ರು. ಕೊಲೆಗಾತಿ ಪೊಲೀಸ್ರ ಕೈಗೆ ಸಿಕ್ಕಿ ಬಿದ್ಲು, ಆದ್ರೆ, ಆಕೆ ಕೊಲೆ ಮಾಡಿದ್ಯಾಕೆ? ಕೊಲೆ ಮಾಡೋಕೆ ಆಕೆಗೆ ಇದ್ದ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಒಳ್ಳೆಯ ಓದನ್ನು ಓದಿಕೊಂಡಿದ್ದ ಅಮೃತಾ ಪೊಲೀಸ್ರ ವಿಚಾರಣೆಯಲ್ಲಿ ತಡಬಡಿಸಿದ್ದು ಬಿಟ್ಟರೆ ನಿಖರ ಕಾರಣ ಇಲ್ಲಿಯವರಗೂ ಹೇಳಲೇ ಇಲ್ಲ.
ತಾಯಿಯನ್ನು ಯಾಕಮ್ಮ ಕೊಂದೆ ಅಂತ ಪೊಲೀಸ್ರು ಪರಿ ಪರಿಯಾಗಿ ಕೇಳಿದ್ರು ಆಕೆ ಹೇಳಿದ್ದು ಮಾತ್ರ, ಕಂತೆ ಕಂತೆ ಸ್ಟೋರಿಗಳನ್ನು ಮಾತ್ರ. ನಾನು ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸೋಕೆ ಆಗುತ್ತಿರಲಿಲ್ಲ. ಪ್ರೀತಿ ಮಾಡ್ತಾ ಇದ್ದೇ ಅದನ್ನು ಉಳಿಸಿಕೊಳ್ಳೊದಕ್ಕೂ ಆಗ್ತಾ ಇರ್ಲಿಲ್ಲ ಅನ್ನೋದನ್ನಷ್ಟೇ ಹೇಳೋ ಅಮೃತಾ ಕೊನೆಗೆ ಪೊಲೀಸ್ರಿಗೆ ಕೈ ಮುಗಿದು ನನ್ನನ್ನ ಸಾಯಿಸಿಬಿಡಿ ಅಂತಾಳೆ.
ಮಗಳು ಸಾಲ ಮಾಡಿಕೊಂಡಿದ್ದಕ್ಕೆ ತಾಯಿ ಕೊಲೆ ಮಾಡೋದು ಸರಿನಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ತಾ ಮಾಡಿಕೊಂಡ ಸಾಲದ ಬಗ್ಗೆ ಹೇಳಿಕೊಂಡಿದ್ರೆ ತಾಯಿ ತನ್ನ ಕೈಲಾದ ಸಹಾಯ ಮಾಡುತ್ತಾ ಇದ್ಲು ಅಲ್ವಾ. 9 ತಿಂಗಳು ಗರ್ಭಗುಡಿಯಲ್ಲಿ ಸಾಕಿ ಸಲಹಿದ್ದವಳು ಮಗಳನ್ನು ಬೀದಿಗೆ ಬಿಡುತ್ತಾ ಇದ್ದಳಾ ಅನ್ನೋ ಪ್ರಶ್ನೆ ಹುಟ್ಟದೇ ಇರೋದಿಲ್ಲ. ಈಗ ಅಮೃತಾ ವಿಚಾರದಲ್ಲೂ ಅದೇ ಆಗಿರೋದು.
ಅಮೃತಾ ತಾಯಿಯನ್ನು ಕೊಲ್ಲೋದಕ್ಕೂ ಮುನ್ನ ಎಷ್ಟು ಪ್ಲಾನ್ ಮಾಡಿದ್ಲು ಅಂದರೆ ಅವಳು ಈ ಮಟ್ಟಿಗಿನ ಕಲ್ಮಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾಳೆ ಅನ್ನೋದು ಯಾರಿಗೂ ಗೊತ್ತೇ ಇರ್ಲಿಲ್ಲ. ಪ್ರಿಯತಮನ ಜೊತೆ ಅಂಡಮಾನ್‍ಗೆ ಹೋಗೋಳು 15 ದಿನ ಮುನ್ನವೇ ಟಿಕೆಟ್ ಅನ್ನು ಬುಕ್ ಮಾಡಿದ್ಲು. ಟಿಕೆಟ್ ಬುಕ್ ಮಾಡಿದವಳಿಗೆ 15 ದಿನ ಕಾಲಾವಕಾಶವೂ ಇತ್ತು. ತನ್ನ ತಪ್ಪನ್ನು ತಾಯಿಯ ಮಡಿಲಲ್ಲಿ ಮಲಗಿ ಹೇಳಿಕೊಂಡಿದ್ರೆ ನಿರ್ಮಲ ಮನಸ್ಸಿನ ತಾಯಿ ಏನಾದ್ರು ಮಾಡುತ್ತಾ ಇದ್ದಳು ಅನ್ಸುತ್ತೆ. ಇವತ್ತು ಅವಳು ಮಾಡಿದ ಕೆಲಸ ತಲೆ ಎತ್ತದಂತೆ ಮಾಡಿದೆ. ತಲೆ ಎತ್ತೋದು ಇರ್ಲಿ, ಇಡೀ ಸಮಾಜವೇ ಇವಳಿಂದ ತಲೆ ತಗ್ಗಿಸುವಂತೆ ಮಾಡಿದೆ.