ಬೆಂಗಳೂರು: ನಾವು ಟವೆಲ್ ಆದ್ರು ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರೋದು ಕರ್ಚೀಫ್ ಮಾತ್ರ ಎಂದು ಕೇಂದ್ರದ ನೆರೆ ಪರಿಹಾರದ ಹಣವನ್ನು ವಿಧಾನ ಪರಿಷತ್ ಸದಸ್ಯ ಟಿಎ ಶರವಣ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಜೆಡಿಎಸ್ ಪಕ್ಷ ಮಾಡುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು 5000 ಕೋಟಿ ತುರ್ತು ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರ ಕರ್ಚೀಫ್ ಕೊಟ್ಟ ಹಾಗೆ ರಾಜ್ಯಕ್ಕೆ ಪುಡಿಗಾಸು ಕೊಟ್ಟಿದ್ದಾರೆ. ಅದ್ದರಿಂದ 87 ರ ಇಳಿ ವಯಸ್ಸಿನಲ್ಲೂ ದೇವೇಗೌಡರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಹೇಳಿದರು.
Advertisement
Advertisement
ಕೇಂದ್ರ ನಮಗೆ ಸುಮ್ಮನೆ ಏನು ಹಣ ಕೊಡುತ್ತಿಲ್ಲ. ರಾಜ್ಯದಿಂದ 1 ಲಕ್ಷ ಕೋಟಿಗೂ ಹೆಚ್ಚು ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಪ್ರವಾಹದಿಂದ ತತ್ತರಿಸಿದ ಜನರನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಜೆಡಿಎಸ್ ಪಕ್ಷ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ಮಾಡುತ್ತಿದೆ ಎಂದು ತಿಳಿಸಿದರು.
Advertisement
ಇದೇ ವೇಳೆ ಅಧಿವೇಶನಕ್ಕೆ ಮಾಧ್ಯಮಗಳ ತಡೆ ವಿಚಾರವಾಗಿ ಮಾತನಾಡಿದ ಶರವಣ, ಬಿಜೆಪಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳಾಗಿವೆ. ಅವರ ಕೈಯಲ್ಲಿ ನಿಭಾಯಿಸೋದಕ್ಕೆ ಆಗಿಲ್ಲ. ಪ್ರವಾಹದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಜನರಿಗೆ ಇವರ ಬಂಡವಾಳ ಎಲ್ಲಿ ಗೊತ್ತಾಗಿಬಿಡುತ್ತೆ ಎಂದು ಮಾಧ್ಯಮಗಳ ನಿಯಂತ್ರಣ ಮಾಡಿದ್ದಾರೆ. ಮಾಧ್ಯಮ ಪ್ರಜಾಪ್ರಭುತ್ವದ ಒಂದ ಅಂಗ, ಅದನ್ನು ದೂರ ಇಡೋದು ಸರಿಯಲ್ಲ. ಕೂಡಲೇ ಮಾಧ್ಯಮಗಳ ನಿಯಂತ್ರಣ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.