– ಡಿ.15 ರಿಂದ ಕಾಮಗಾರಿ ಆರಂಭ
– ದುರಸ್ತಿಗೊಳಿಸದಿದ್ದರೆ ಸೇತುವೆ ಕುಸಿತ
– ಖಾಸಗಿ ಸಂಸ್ಥೆಯಿಂದ ಬಿಬಿಎಂಪಿಗೆ ವರದಿ
ಬೆಂಗಳೂರು: ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿರುವ 546 ಮೀಟರ್ ಉದ್ದದ ಸುಮನಹಳ್ಳಿ ಫ್ಲೈ ಓವರ್ ಒಂದು ತಿಂಗಳು ಬಂದ್ ಆಗಲಿದೆ.
ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಒಂದು ಬದಿಯ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಬಿಡಿಎ ನಿರ್ಮಿತ ನಿರ್ವಹಣೆಯಲ್ಲಿದ್ದ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಖಾಸಗಿ ಸಂಸ್ಥೆಯೊಂದು ವರದಿ ನೀಡಿದೆ.
Advertisement
ಈ ವರದಿಯ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಲಘು ವಾಹನಗಳಿಗೆ ಮುಕ್ತವಾಗಿದ್ದ ಸುಮನಹಳ್ಳಿ ಮೇಲ್ಸೇತುವೆಯನ್ನು ಒಂದು ತಿಂಗಳು ಬಂದ್ ಮಾಡಲು ಬಿಬಿಎಂಪಿ ಮುಂದಾಗಿದೆ. ಇದೇ ತಿಂಗಳ 15 ರಿಂದ ಭಾರೀ ವಾಹನಗಳ ಸಂಚಾರಕ್ಕೆ ಮೇಲ್ಸುತುವೆ ಎರಡು ಕಡೆಯಿಂದಲೂ ಅವಕಾಶ ನೀಡಲಾಗುವುದಿಲ್ಲ.
Advertisement
Advertisement
ಸೇತುವೆಯ ಬೀಮ್(ಅಡ್ಡ ಕಂಬ), ಸ್ಲ್ಯಾಬ್ ಗಳಲ್ಲಿ ಹನಿಕಾಂಬ್(ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಸೃಷ್ಟಿಯಾಗಿದೆ. ಹೀಗಾಗಿ ದುರಸ್ತಿ ಕಾರ್ಯ ಶೀಘ್ರ ಆರಂಭಿಸದಿದ್ದರೆ ಮೇಲ್ಸುತುವೆಯನ್ನು ತೆಗೆಯಬೇಕಾಗುತ್ತದೆ. ಹೀಗಾಗಿ ಭಾರೀ ವಾಹನಗಳು ಫ್ಲೈಓವರ್ ಮೇಲೆ ಸಾಗದಂತೆ ಸಂಚಾರಿ ಪೊಲೀಸರು ಚಾಲಕರನ್ನು ತಡೆದು ಸರ್ವಿಸ್ ರಸ್ತೆಯ ಮೂಲಕ ಸಾಗುವಂತೆ ನಿರ್ದೇಶನ ನೀಡುತ್ತಿದ್ದಾರೆ.
Advertisement
ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೇತುವೆಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸೇತುವೆಯ ಸದೃಢತೆ ಪರೀಕ್ಷಿಸಲು ಸಿವಿಲ್- ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯನ್ನು ನಿಯೋಜಿಸಿತ್ತು. ಈ ಸಂಸ್ಥೆಯ ಎಂಜಿನಿಯರ್ ಗಳು ಪರಿಶೀಲಿಸಿ ಸೇತುವೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದರಿಂದ ದೋಷ ಉಂಟಾಗಿದೆ ಎಂದು ವರದಿ ನೀಡಿದ್ದರು.
ಸೇತುವೆ ರ‍್ಯಾಂಪ್ ಹಾಗೂ ಪಿಲ್ಲರ್ ಮಧ್ಯೆ ಅಳವಡಿಸಿರುವ ಬೇರಿಂಗ್ ನಲ್ಲಿ ದೋಷವಿದೆ. ಅಲ್ಲದೇ ಕಳಪೆ ಕಾಮಗಾರಿಯಿಂದ ಹಲವು ಬೀಮ್ ಹಾಗೂ ಸ್ಲ್ಯಾಬ್ ಗಳಲ್ಲಿ ಹನಿಕಾಂಬ್ ಸೃಷ್ಟಿಯಾಗಿದೆ. ಈಗಲೇ ದುರಸ್ತಿ ಮಾಡದೇ ಇದ್ದರೆ ಮುಂದೆ ಸೇತುವೆಯೇ ಕುಸಿದು ಬೀಳಬಹುದು ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಂಚಾರವನ್ನು ಬಂದ್ ಮಾಡಲು ಮುಂದಾಗಿದೆ.
ಸೇತುವೆಯ ಬೇರಿಂಗ್‍ನಲ್ಲಿ ಕಂಡು ಬಂದಿರುವ ದೋಷ ಸರಿ ಮಾಡುವ ತಜ್ಞರು ರಾಜ್ಯದಲ್ಲಿ ಇಲ್ಲದೇ ಇರುವುದರಿಂದ ಬಿಬಿಎಂಪಿ ಮುಂಬೈ ಮತ್ತು ದೆಹಲಿಯ ವಿವಿಧ ತಜ್ಞರಿಗೆ ಆಹ್ವಾನ ನೀಡಿದೆ. ತಜ್ಞರು ಪರಿಶೀಲಿಸಿ ಅಂದಾಜು ವೆಚ್ಚವನ್ನು ನೀಡಿದ ಬಳಿಕ ಬಿಬಿಎಂಪಿ ಕಾಮಗಾರಿ ಆರಂಭಿಸಲಿದೆ.
ಸುಮನಹಳ್ಳಿ ಸಿಗ್ನಲ್‍ನಲ್ಲಿ ವಿಜಯನಗರ, ಮಾರುಕಟ್ಟೆ ಕಡೆಯಿಂದ ಸುಂಕದಕಟ್ಟೆ, ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ವಾಹನಗಳು ಸಂಚರಿಸುತ್ತವೆ. ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಡಿಎ ಫ್ಲೈಓವರ್ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಉದ್ಘಾಟನೆಯಾದ ಬಳಿಕ 2016ರವರೆಗೆ ಬಿಡಿಎ ನಿರ್ವಹಣೆ ಮಾಡಿ ನಂತರ ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ವಹಣೆ ಸರಿ ಮಾಡದ ಪರಿಣಾಮ ರಸ್ತೆ ಗುಂಡಿ ಬಿದ್ದಿತ್ತು.
ಈ ವಿಚಾರದ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ವತಃ ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡಿದ್ದರು. ಮೇಲ್ಸೇತುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೇತುವೆ ಮೇಲೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಇರುವುದರಿಂದ ಗುಂಡಿ ಬಿದ್ದಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಸೇತುವೆ ನಿರ್ವಹಣೆ ಮಾಡಿರಲಿಲ್ಲ. ಈ ಬ್ರಿಡ್ಜ್ ನಿರ್ಮಾಣ ಮಾಡಿದ ಚೆನ್ನೈ ಮೂಲದ ಖಾಸಗಿ ಸಂಸ್ಥೆ ಇಸಿಸಿಐ 3 ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿದೆ. ಈ ಸೇತುವೆ ಹಾಳಾಗಳು ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ನೇರವಾಗಿ ಹೇಳಿದ್ದರು.
ಕೋಲ್ಕತ್ತಾ ಸೇತುವೆ ದುರಂತ:
2018ರ ಸೆಪ್ಟೆಂಬರ್ ನಲ್ಲಿ ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ ಮೂರು ಮಂದಿ ಸಾವನ್ನಪ್ಪಿ, 25 ಜನ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ದೇಶದ ಎಲ್ಲ ರಾಜ್ಯ ಸರ್ಕಾರಗಳು ಹಳೆಯ ಸೇತುವೆಯ ಸದೃಢತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುತ್ತಿವೆ.