Connect with us

Bengaluru City

ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

Published

on

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯದು ಯಾವಾಗಲೂ ಬ್ಯುಸಿ ಶೆಡ್ಯೂಲ್. ಹೀಗಾಗಿ ಸ್ಟ್ರೀಟ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರ ಹಾರ್ಟ್ ಫೇವರೆಟ್ ಈ ಸ್ಟ್ರೀಟ್ ಫುಡ್‍ಗಳ ಆರ್ಭಟ ನಗರದ ಗಲ್ಲಿಗಲ್ಲಿಯಲ್ಲೂ ಜೋರಾಗಿದೆ. ಅಗ್ಗದ ದರ, ಟೇಸ್ಟಿ ಸ್ಟ್ರೀಟ್ ಫುಡ್‍ಗಳು ಇದೀಗ ಕಿಲ್ಲರ್ ಫುಡ್ ಆಗಿ ಕೆಲವೆಡೆ ಬದಲಾಗುತ್ತಿದೆ. ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಈ ಡರ್ಟಿ ಸ್ಟ್ರೀಟ್ ಫುಡ್ ಸೀಕ್ರೆಟ್ ಬಟಾಬಯಲು ಮಾಡಿದೆ.

ಸಂಜೆ ಹೊತ್ತಲ್ಲಿ ಸ್ಟ್ರೀಟ್‍ನಲ್ಲಿ ನಿಂತ್ಕೊಂಡು ಗೋಬಿ ಮಂಚೂರಿನೋ, ಸ್ಪೈಸಿ ತಿಂಡಿ ಮೆಲ್ಲೋಣ ಎಂದು ಹೋಗುವವರು ಹೆಚ್ಚು. ಇತ್ತ ಗರಿ ಗರಿ ದೋಸೆ, ಇಡ್ಲಿ, ಬೊಂಡಾ ಇದಕ್ಕೆಲ್ಲಾ ಕಾಂಬಿನೇಷನ್ ಆಗಿ ಚಿಕನ್, ಮಟನ್ ಇದ್ದರೆ ಸಂಜೆ ಹೋದವರು ಅದನ್ನೆಲ್ಲಾ ತಿಂದು ಬರುವಷ್ಟರಲ್ಲಿ ಕತ್ತಲಾಗಿರುತ್ತೆ. ಆ ರೇಂಜ್‍ಗೆ ಸ್ಟ್ರೀಟ್ ಫುಡ್ ನಮ್ಮನ್ನು ಆಕರ್ಷಿಸುತ್ತೆ. ಈ ತಿಂಡಿಗಳು ಅಗ್ಗದ ದರದಲ್ಲೂ ಸಿಗುತ್ತೆ. ಜೊತೆಗೆ ಟೇಸ್ಟ್ ಕೂಡ ಸಖತ್ ಆಗಿರುತ್ತೆ ಎಂದು ಜನ ಸ್ಟ್ರೀಟ್ ಫುಡ್‍ಗಳ ಸೆಂಟರ್ ಮುಂದೆ ಕ್ಯೂ ನಿಲ್ತಾರೆ. ಆದರೆ ಈ ಸ್ಟ್ರೀಟ್‍ಫುಡ್ ಜನರ ಪಾಲಿಗೆ ಕಿಲ್ಲರ್ ಫುಡ್ ಆಗಿದೆ. ಇದೆಲ್ಲಾ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಜೆಸಿ ರಸ್ತೆ, ಲಾಲ್‍ಬಾಗ್- ನ್ಯಾಷನಲ್ ಕಾಲೇಜು ಸಮೀಪದ ವಿವಿ ಪುರಂ ಫುಡ್ ಸ್ಟ್ರೀಟ್ ಇಡೀ ಬೆಂಗಳೂರಲ್ಲಿ ತುಂಬಾನೇ ಫೇಮಸ್. ಬೆಳಗ್ಗೆ, ಮಧ್ಯಾಹ್ನ ತಡರಾತ್ರಿಯಾದರೂ ಇಲ್ಲಿ ಫುಡ್ ಸಿಗುತ್ತೆ. ಸಂಜೆಯಂತೂ ಇಲ್ಲಿ ಕಾಲಿಡೋಕು ಜಾಗ ಇರಲ್ಲ. ಆದರೆ ಈ ಏರಿಯಾದಲ್ಲಿ ಸಿಗುವ ಕೆಲ ಹೋಟೆಲ್‍ನ ಡರ್ಟಿ ಸೀನ್ ನೋಡಿದರೆ ವಾಕರಿಕೆ ಬರತ್ತೆ.

ದೋಸೆ ಹೊಯ್ಯುವ ಹೆಂಚು ತೊಳೆದು ಎಷ್ಟು ಕಾಲವಾಗಿದ್ಯೋ ಏನೋ? ಇಡ್ಲಿ ಬೇಯಿಸುವ ಪಾತ್ರೆ ನೋಡಿದರೆ ಜನ್ಮದಲ್ಲಿ ಇಡ್ಲಿ ತಿನ್ನೋದೆ ಬೇಡ ಅನಿಸಿಬಿಡುತ್ತೆ. ಇಡ್ಲಿಗೆ ನೊಣ ಫ್ರೀ ಎನ್ನುವಂತೆ ಬೇಯಿಸಿಟ್ಟ ಇಡ್ಲಿ ಪಕ್ಕ ಕಸದ ಬುಟ್ಟಿಯ ಮುಂದೆ ನೊಣಗಳು ಹಾರಾಡುತ್ತಿರುತ್ತೆ. ಇಲ್ಲಿ ಸ್ವಚ್ಛತೆಗೆ ಮೂರುಕಾಸಿನ ಬೆಲೆ ಇಲ್ಲ. ಅಲ್ಲದೆ ನೀವು ತಿಂದ ಪಾತ್ರೆಗಳನ್ನ ಅವರು ತೊಳೆಯೋದು ನೋಡಿದ್ರೆ ಸುಸ್ತಾಗಿ ಹೋಗ್ತಿರಾ. ನೆಟ್ಟಗೆ ಲೋಟ ತಟ್ಟೆಯನ್ನು ತೊಳೆಯದೇ ಹಾಗೆಯೇ ತಿಂಡಿಗಳನ್ನು ಬಡಿಸಿ ಕೊಡ್ತಾರೆ.

ಇತ್ತ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣದ ಫುಡ್ ಸ್ಟಾಲ್ ಕಥೆಯಂತೂ ಕೇಳೋದೇ ಬೇಡ. ರೋಡ್‍ನಲ್ಲೇ ಕಿಚನ್, ಡರ್ಟಿ ಫುಡ್‍ನ ದುನಿಯಾ ಇದು. ರಸ್ತೆಯಲ್ಲೆ ತಿಂಡಿ ಲಟ್ಟಿಸುತ್ತಾರೆ, ಬಾಣಲೆ ಇಟ್ಟು ಬೇಯಿಸ್ತಾರೆ. ಕಡೆಗೆ ಧೂಳು ಮುತ್ತಿದ್ದ ಮೇಲೆ ತಿಂಡಿಗಳನ್ನು ಮಾರುತ್ತಾರೆ. ತಿಂಡಿ ಮೇಲೆ ನೋಣವೆಲ್ಲ ಕೂರುತ್ತಿದೆ ಎಂದು ಪ್ರಶ್ನಿಸಿದರೆ ವ್ಯಾಪಾರಿಗಳು ಮಾತ್ರ ಏನೂ ಪ್ರತಿಕ್ರಿಯೆ ಕೊಡದೆ ಬಾಯಿ ಮುಚ್ಚಿ ಇರುತ್ತಾರೆ.

ಹಾಗೆಯೇ ವಿಜಯನಗರ ಸ್ಟ್ರೀಟ್ ಫುಡ್ ಬಳಿ ಸಣ್ಣ ಚರಂಡಿ ಇದೆ. ಅಲ್ಲೇ ಇಡ್ಲಿ ಇಟ್ಟು, ಇಡ್ಲಿ ತೆಗೆಯುವುದಕ್ಕೆ ಬಳಸೋ ನೀರು ನೋಡಿದರೆ ಅಸಹ್ಯ ಎನಿಸುತ್ತೆ. ಕುಡಿಯುವ ನೀರಿನ ಜಾಗ ಹಾಗೂ ಕೈತೊಳೆಯೊ ಜಾಗಕ್ಕೆ ಏನೂ ವ್ಯತ್ಯಾಸವಿಲ್ಲ. ಹೀಗಿರುವ ಸ್ಥಳದಲ್ಲಿ ತಿಂಡಿ ತಿಂದರೆ ಕಾಯಿಲೆ ಗ್ಯಾರೆಂಟಿ.

ನಾನ್‍ವೆಜ್ ತಿಂಡಿಗಳಿಗೆ ಫೇಮಸ್ ಆಗಿರುವ ಶಿವಾಜಿನಗರದಲ್ಲಿ ಸ್ವಚ್ಛತೆ ನೋಡಿದರೆ ದಂಗಾಗುತ್ತೀರ. ನೇತು ಹಾಕಿರೋ ಪ್ರಾಣಿಗಳ ದೇಹದಂತೆ ಇಲ್ಲಿ ಊಟದ ಸ್ವಚ್ಛತೆಯೂ ಜೋತು ಬಿದ್ದಿದೆ.

ಈ ಸ್ಟ್ರೀಟ್ ಫುಡ್ ತಯಾರಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು. ಇಲ್ಲವಾದರೆ ಉಗುರಿನಲ್ಲಿರೋ ಫಂಗಸ್ ದೇಹ ಸೇರಿ ಕರುಳುಬೇನೆ ಶುರುವಾಗುತ್ತದೆ. ಜೊತೆಗೆ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತೆ. ಹೀಗಾಗಿ ಕಡಿಮೆ ಬೆಲೆಗೆ, ಬಿಸಿ ಬಿಸಿ ಸಿಗುತ್ತೆ ಎಂದು ಸ್ಟ್ರೀಟ್ ಫುಡ್ ಮೊರೆ ಹೋಗೋ ಮುನ್ನ ಎಚ್ಚರದಿಂದಿರಿ. ಸ್ವಚ್ಛತೆ ಇಲ್ಲದ ಕಡೆ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ.

Click to comment

Leave a Reply

Your email address will not be published. Required fields are marked *

www.publictv.in