ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿವಾದಕ್ಕೆ ಒಳಗಾಗಿ ಕೈ ಬಿಟ್ಟಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮರುಜೀವ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ. ಈ ಕುರಿತು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿ ಸರ್ಕಾರ ಚಿಂತನೆ ಬಗ್ಗೆ ಮಾಹಿತಿ ನೀಡಿದ್ದಾರೆ.
2017 ಮಾರ್ಚ್ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಕೈಬಿಟ್ಟಿದ್ದು, ಚಾಲುಕ್ಯ ಸರ್ಕಲ್ ನಿಂದ ಎಸ್ಟೀಮ್ ಮಾಲ್ ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು 1,856 ಕೋಟಿ ರೂ. ಅಂದಾಜು ಮೊತ್ತ ನಿಗದಿ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧ ಹಾಗೂ ಜನಸಾಮಾನ್ಯರ ಒತ್ತಡದಿಂದಾಗಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಮತ್ತೆ ಈಗ ಡಿಸಿಎಂ ಬ್ರಿಡ್ಜ್ ಕುರಿತು ಮರು ಪರೀಶಿಲನೆ ನಡೆಸಲು ತೀರ್ಮಾನ ಕೈಗೊಂಡಿದ್ದಾಗಿ ಹೇಳಿದ್ದಾರೆ.
Advertisement
Advertisement
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಎಂ ಪರಮೇಶ್ವರ್ ಅವರು, ಸ್ಟೀಲ್ ಬ್ರಿಡ್ಜ್ ನಿರ್ಮಾಣ ನಮಗೆ ಅಗತ್ಯವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಹೆಚ್ಚು ಅನುಕೂಲ ಆಗಲಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ(ಡಿಪಿಆರ್) ಮರುಪರಿಶೀಲನೆಗೆ ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಯಾರು ವಿರೋಧ ಮಾಡುತ್ತಾರೆ ಅಂತಹವರ ಹಾಗೂ ಜನಸಾಮಾನ್ಯರ ಅಭಿಪ್ರಾಯ ಪಡೆಯಲಾಗುವುದು. ಡಿಪಿಆರ್ ನಲ್ಲಿ ಇರುವ ಲೋಪಗಳ ಅಂಶಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸರಿಪಡಿಸಿಕೊಳ್ಳುತ್ತವೆ ಎಂದರು.
Advertisement
ಆರಂಭದಲ್ಲಿ 1,356 ಕೋಟಿ ಇದ್ದ ಯೋಜನೆಯ ಗಾತ್ರ ಕೆಲ ದಿನಗಳ ಅಂತರದಲ್ಲಿ 450 ಕೋಟಿ ರೂ. ಹೆಚ್ಚಿಸಿ ಯೋಜನೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ದಿಢೀರ್ ಆಗಿ 450 ಕೋಟಿ ರೂ. ಮೊತ್ತ ಏರಿಕೆಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ಅಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಸದ್ಯ ಸಿಎಂ ಆಗಿದ್ದಾರೆ.
Advertisement
ಯೋಜನೆ ನಿರ್ಮಾಣವಾದರೆ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳು 20 ನಿಮಿಷ ಸಾಕು ಎಂಬ ಪರಮೇಶ್ವರ್ ಹೇಳಿಕೆ ನೀಡಲು ಬಿಡಿಎ ಎಂಜಿನಿಯರ್ ಹಾಗೂ ಗುತ್ತಿಗೆ ಕಂಪೆನಿಗಳ ಒತ್ತಡವೇ ಕಾರಣ ಎನ್ನಲಾಗಿದೆ. 6.7 ಕಿ.ಮೀ ದೂರದ ಸೇತುವೆ ನಿರ್ಮಾಣವಾದರೆ ಸುಮಾರು ಸಾವಿರಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದನ್ನು ಓದಿ: ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!
ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಪಕ್ಷದ ನಾಯಕಿ ತೇಜಸ್ವಿನಿ ಅವರು, ಸ್ಟೀಲ್ ಬ್ರಿಡ್ಜ್ ಪರಿಸರಕ್ಕೆ ಹೆಚ್ಚಿನ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ನಿರ್ಮಾಣದ ವೇಳೆ ಹೆಚ್ಚಿನಮರಗಳಿಗೆ ಹಾನಿ ಆಗಲಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, ಇರುವ ರಸ್ತೆಯನ್ನು ಆಗಲೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂದು ಸಲಹೆ ನೀಡಿದರು.
ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ?
ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ಪ್ರತಿಪಕ್ಷ ಬಿಜೆಪಿ ಈ ಯೋಜನೆಯಲ್ಲಿ ಡೀಲ್ ನಡೆದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಈ ಯೋಜನೆಯ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು. ವಿವಾದ ಜೋರಾಗುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಇದನ್ನು ಓದಿ: ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv