ಬೆಂಗಳೂರು: ಐಪಿಎಲ್ (IPL) ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದ (Stampede) ಘಟನೆಗೆ ಸಂಬಂಧಿಸಿದ ವರದಿ ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (High Court) ಆದೇಶಿಸಿದೆ.
ಈ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸುವಂತೆ ಅಡ್ವೊಕೇಟ್ ಜನರಲ್ ಮನವಿ ಮಾಡಿದರೂ, ನ್ಯಾಯಪೀಠವು ಅದನ್ನು ತಿರಸ್ಕರಿಸಿದೆ. ವರದಿ ಬಹಿರಂಗ ಮಾಡುವುದರಿಂದ ಪ್ರತಿವಾದಿಗಳ ಅಭಿಪ್ರಾಯವನ್ನೂ ತಿಳಿಯಬಹುದಾದಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ
ಜೂನ್ 4, 2025ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಆರ್‌ಸಿಬಿ, ಕೆಎಸ್‍ಸಿಎ, ಡಿಎನ್‍ಎಗೆ ತನಿಖಾ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.
ಜು.11 ರಂದು ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ (Chinnaswamy Stampede) ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ ಜಗದೀಶ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿಯೇ (RCB) ಕಾರಣ ಎಂದು ಉಲ್ಲೇಖಿಸಲಾಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಪೊಲೀಸರ ಅನುಮತಿ ಪಡೆಯದೇ ಫ್ರೀ ಪಾಸ್ ಎಂದು ಘೋಷಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನ ಮುಡಿಗೇರಿಸಿಕೊಂಡಿತ್ತು. ಆದರೆ, ಆರ್‌ಸಿಬಿ ಫ್ಯಾನ್ಸ್‌ಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾಗಲೇ ದುರಂತ ಸಂಭವಿಸಿತ್ತು. ಇದನ್ನೂ ಓದಿ: ಕೊಹ್ಲಿಗಾಗಿ ಆರ್‌ಸಿಬಿಯ ಆತುರವೇ ಕಾಲ್ತುಳಿತಕ್ಕೆ ಕಾರಣ – ಸಿಐಡಿ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲು