ಬೆಂಗಳೂರು: ಮಾರ್ಚ್ 27 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಪರೀಕ್ಷೆಯನ್ನ ಪಾರದರ್ಶಕವಾಗಿ ನಡೆಸಲು ಎಸ್‍ಎಸ್‍ಎಲ್‍ಸಿ ಬೋರ್ಡ್ ಹೊಸ ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ. ಪರೀಕ್ಷೆ ಅಕ್ರಮ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಪರೀಕ್ಷೆಯನ್ನ ಸುಗಮವಾಗಿ ನಡೆಸುವ ದೃಷ್ಟಿಯಿಂದ ಸ್ಥಾನಿಕ ಜಾಗೃತ ದಳವನ್ನ ನೇಮಕ ಮಾಡಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಸ್ವಾಧೀನ ಮಾಡಿಕೊಳ್ಳಲು ವಿಶೇಷ ಅಧಿಕಾರಿಯನ್ನ ನೇಮಕ ಮಾಡಲಾಗಿದೆ.
ಏನಿದು ಸ್ಥಾನಿಕ ಜಾಗೃತ ದಳ?:
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ತಡೆಯಲು, ಪ್ರಶ್ನೆ ಪತ್ರಿಕೆ ಸಂರಕ್ಷರ ಜೊತೆ ಈ ಸ್ಥಾನಿಕ ಜಾಗೃತದಳದ ಅಧಿಕಾರಿಯನ್ನ ನೇಮಕ ಮಾಡಲಾಗಿರುತ್ತದೆ. ಸ್ಥಾನಿಕ ಜಾಗೃತ ಅಧಿಕಾರಿಯು ಜವಾಬ್ದಾರಿಯುತವಾಗಿ ಖಜಾನೆಯಿಂದ ಸಂಬಂಧಿಸಿ ಮಾರ್ಗದಲ್ಲಿ ಮಾರ್ಗಾಧಿಕಾರಿಗಳು ಗೌಪ್ಯ ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿ ಸಮಯದಿಂದ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಲೋಪವಾಗದಂತೆ ತಲುಪಿಸುವವರೆಗೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಗೌಪ್ಯ ಪ್ರಶ್ನೆ ಪತ್ರಿಕೆಗಳು ತಲುಪಿಸಿದ ಸಮಯದಿಂದ ಪರೀಕ್ಷೆ ಮುಗಿಯೋವರೆಗೂ ಪ್ರಶ್ನೆ ಪತ್ರಿಕೆಯ ಯಾವುದೇ ತುಣುಕು ಸೋರಿಕೆಯಾಗದಂತೆ ಮೇಲ್ವಿಚಾರಣೆ ಮಾಡುವುದು ಸ್ಥಾನಿಕ ಅಧಿಕಾರಿ ಜವಾಬ್ದಾರಿ ಆಗಿರುತ್ತದೆ. ಒಂದು ವೇಳೆ ಏನಾದ್ರು ಲೋಪವಾದ್ರೆ ಈ ಅಧಿಕಾರಿ ನೇರ ಹೊಣೆ ಆಗಿರುತ್ತಾನೆ.
ಮೊಬೈಲ್ ಫೋನ್ ಸ್ವಾಧೀನಾಧಿಕಾರಿ?:
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಈ ಮೊಬೈಲ್ ಫೋನ್ ಸ್ವಾಧೀನಾಧಿಕಾರಿ ನೇಮಕ ಮಾಡಲಾಗಿದೆ. ಈ ಅಧಿಕಾರಿಯು ಪರೀಕ್ಷಾ ಕೇಂದ್ರದಲ್ಲಿ ಪಾಲ್ಗೊಳ್ಳುವ ಉಪಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ಅಧಿಕಾರಿ, ಕೊಠಡಿ ಮೇಲ್ವಿಚಾರಕರು, ಕಚೇರಿ ಸಿಬ್ಬಂದಿ, ಗ್ರೂಪ್- ಡಿ ಸೇರಿದಂತೆ ಎಲ್ಲರ ಮೊಬೈಲ್ ಫೋನ್ ನ್ನ ಬೆಳಗ್ಗೆ 9.15ಕ್ಕೆ ವಶಪಡಿಸಿಕೊಳ್ಳಬೇಕು. ಪರೀಕ್ಷೆ ಕೆಲಸ ಮುಗಿದ ಬಳಿಕ ಮೊಬೈಲ್ ಫೋನ್ ವಾಪಸ್ ಕೊಡುವ ಕೆಲಸ ಈ ಅಧಿಕಾರಿಯದ್ದಾಗಿರುತ್ತದೆ. ಮೊಬೈಲ್‍ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಬಹುದು ಅಂತ ಬೋರ್ಡ್ ಈ ನಿರ್ಧಾರ ಮಾಡಿದೆ.