-ತಡವಾಗಿ ಆಗಮಿಸಿದ ಸಚಿವರು, ಚಳಿಗೆ ನಡುಗಿದ ಪುಟ್ಟ ಮಕ್ಕಳು
ಬೆಂಗಳೂರು: ರಾಜ್ಯಾದ್ಯಂತ ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದರು.
ಬೆಂಗಳೂರಿನ ಚಿಕ್ಕಜಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಚಿವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ಸೂಚಿಸಲಾಗಿದೆ. ಈ ಬಾರಿ 100ಕ್ಕೆ 100ರಷ್ಟು ಟಾರ್ಗೆಟ್ ರೀಚ್ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಂಚಾಯ್ತಿ, ಶಾಲೆ, ಮನೆಗಳಿಗೆ ಹೋಗಿ ಲಸಿಕೆ ಹಾಕಿ ಜಾಗೃತಿ ಮೂಡಿಸೋದಕ್ಕೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
Advertisement
Advertisement
ಕಳೆದ ವರ್ಷ 66 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲಾಗಿತ್ತು. ಈ ಬಾರಿಯೂ ಉತ್ತಮ ಪ್ರಮಾಣದಲ್ಲಿ ಲಸಿಕೆ ಆಗುತ್ತೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದರು. ಹಾಗೆಯೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಬಗ್ಗೆ ಅಪಪ್ರಚಾರ ಆಗುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಡಿ. ಎಲ್ಲಾ ಖಾಯಿಲೆಗಳಿಗೆ ಲಸಿಕೆ ಅಗತ್ಯ. ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಸಚಿವರು ಪೋಷಕರಲ್ಲಿ ಮನವಿ ಮಾಡಿದರು.
Advertisement
Advertisement
ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಚಿವರು
ತಮ್ಮದೇ ಇಲಾಖೆಯ ಕಾರ್ಯಕ್ರಮಕ್ಕೆ ಸಚಿವರು ತಡವಾಗಿ ಆಗಮಿಸಿದರು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವರು 4 ಗಂಟೆಗೆ ಚಾಲನೆ ನೀಡಬೇಕಿತ್ತು. ಸಚಿವರು ಬೇಗನೇ ಬರ್ತಾರೆ ಅಂತನೇ ಇಲಾಖೆ ಹಾಗೂ ಚಿಕ್ಕಜಾಲ ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗಿನ ಜಾವ 4 ಗಂಟೆಗೆನೇ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯನ್ನ ಸಿಂಗಾರ ಮಾಡಿದ್ದರು. ಆದರೆ ಸಚಿವರು ಮಾತ್ರ ಬರಲೇ ಇಲ್ಲ. ಚಳಿಗೆ ನಡುಗುತ್ತಾ ಹಲವು ತಾಯಂದಿರು ಪುಟ್ಟ ಪುಟ್ಟ ಮಕ್ಕಳನ್ನ ಎತ್ತಿಕೊಂಡು ಬಂದಿದ್ದರು. ಸಚಿವರ ಆಗಮನಕ್ಕಾಗಿ ಇಲಾಖೆಯ ಅಧಿಕಾರಿಗಳು ಕೂಡ ಹೂಗುಚ್ಛ ಹಿಡಿದು, ಕಾದು ನಿಂತಿದ್ದರು. ಆದರೆ ಸಚಿವರು ಮಾತ್ರ ಬರೋಬ್ಬರಿ 6:50ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದು, ಸಚಿವರ ಈ ವರ್ತನೆಗೆ ಇಲಾಖೆಯ ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.