– ಮೋದಿ ಗೆಲುವಿಗೆ ಇವಿಎಂ ದೋಷ ಕಾರಣ
ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿ ಸಿಎಂ ಆದ ಯಡಿಯೂರಪ್ಪ ಒಲ್ಲದ ಶಿಶು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಒಲ್ಲದ ಶಿಶು. ಬಿಜೆಪಿ ಹೈಕಮಾಂಡ್‍ಗೆ ಯಡಿಯೂರಪ್ಪರನ್ನ ಸಿಎಂ ಮಾಡೋದು ಇಷ್ಟ ಇರಲಿಲ್ಲ. ಆದರೆ ಹಠ ಮಾಡಿ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಅವರಿಗೆ ಬ್ರೇಕ್ ಹಾಕೋದಕ್ಕೆ 3 ಜನ ಡಿಸಿಎಂರನ್ನು ಬಿಜೆಪಿ ಹೈಕಮಾಂಡ್ ಮಾಡಿದೆ ಎಂದು ಹೇಳಿದರು.
Advertisement
Advertisement
ಈ ಎಲ್ಲಾ ಕಾರಣದಿಂದ ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ, ಯಡಿಯೂರಪ್ಪ ಎಷ್ಟು ದಿನ ಸಿಎಂ ಆಗಿ ಇರುತ್ತಾರೋ ಗೊತ್ತಿಲ್ಲ. ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರಾ ಎಂದು ಯಡಿಯೂರಪ್ಪರ ಕಾಲೆಳೆದರು. ಯಡಿಯೂರಪ್ಪರಿಗೆ ಬಹುಮತ ಇರಲಿಲ್ಲ. 17 ಜನರನ್ನ ಆಪರೇಷನ್ ಮಾಡಿ, ಆಮಿಷ ತೋರಿಸಿ, ಕುದುರೆ ವ್ಯಾಪಾರ ಮಾಡಿ ಹಿಂಬಾಗಿಲಿನಿಂದ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಈ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದರು.
Advertisement
ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಚಿದಂಬರಂ, ಡಿಕೆ ಶಿವಕುಮಾರ್ ಅವರನ್ನು ಸುಮ್ಮನೆ ಬಂಧನ ಮಾಡಿದೆ. ಕಾಂಗ್ರೆಸ್ ಮುಗಿಸೋದು ಅವರ ಪ್ಲ್ಯಾನ್. ಆದರೆ ಕಾಂಗ್ರೆಸ್ ಮುಗಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
Advertisement
ಮತ್ತೆ ಇವಿಎಂ ಮೇಲೆ ದೋಷ ಹೊರಿಸಿದ ಸಿದ್ದರಾಮಯ್ಯ, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದೋಷ ಆಗಿತ್ತು. ಹೀಗಾಗಿಯೇ ಮೋದಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಎಂದು ಇವಿಎಂ ದೋಷ ಮೋದಿ ಗೆಲುವಿಗೆ ಕಾರಣ ಎಂದು ರಾಜ್ಯ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ ಮೋದಿ ಸಾಧನೆ ಶೂನ್ಯ ಎಂದು ಕಿಡಿಕಾರಿದರು.