ಬೆಂಗಳೂರು: ಅಧಿಕ ರಕ್ತದೊತ್ತಡದಿಂದ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಬೆಳಗ್ಗೆ 6:30ರ ಸುಮಾರಿಗೆ ಅವರಿಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಎದೆನೋವು ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತೀಚಿಗೆ ಉಪಚುನಾವಣೆಯಲ್ಲಿ ಸಕ್ರಿಯವಾಗಿದ್ದ ಸಿದ್ದರಾಮಯ್ಯ ಅವರು ಸ್ವಲ್ಪ ದಣಿದಿದ್ದರು. ಈ ಕಾರಣಕ್ಕೆ ಅವರಿಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಅವರ ಕುಟುಂಬ ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡುವುದಿಲ್ಲ. ಪರೀಕ್ಷೆ ಮಾಡಿ ವಾಪಸ್ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಉಪಚುನಾವಣೆಯ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ, 15 ಕ್ಷೇತ್ರಗಳಲ್ಲಿ 2 ಕ್ಷೇತ್ರದಲ್ಲಿ ಮಾತ್ರ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಉಪಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು.