– ಕ್ಷೇತ್ರಕ್ಕೆ ಹೊಸ ಚಿಹ್ನೆ ಬರುತ್ತೆ
ಬೆಂಗಳೂರು: ನನ್ನ ತಂದೆ ಮಗನ ಪರ ಬರಲ್ಲ, ಅವರ ಬದಲು ನೀವೇ ನಿಂತು ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕ್ಷೇತ್ರದ ಜನರಿಗೆ ಶರತ್ ಬಚ್ಚೇಗೌಡ ಕರೆ ನೀಡಿದ್ದಾರೆ.
ಇಂದು ಹೊಸಕೋಟೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗೆ ನೂರಕ್ಕೆ ನೂರು ನಾನೇ ಅಭ್ಯರ್ಥಿ. ಇಂದಿಗೂ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಹೊಸ ಚಿಹ್ನೆ ಕ್ಷೇತ್ರಕ್ಕೆ ಬರುತ್ತದೆ. ಈ ಮೂಲಕ ಬಿಜೆಪಿ ಟಿಕೆಟ್ ನೀಡದೆ ಇದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಈ ಬಾರಿ ನನ್ನ ಪರ ಕೆಲಸ ಮಾಡಿ. ಗ್ರಾಮ ಮನೆ ಹೊಲ ತೋಟಗಳಿಗೆ ಹೋಗಿ ಮತದಾರರಿಗೆ ಹೊಸ ಚಿಹ್ನೆ ಗುರುತು ಮಾಡಿಕೊಡಿ. ಪಕ್ಷ ಬಿಟ್ಟು ಪ್ರಚಾರ ಮಾಡುವಾಗ ನನ್ನ ತಂದೆ ಬಚ್ಚೇಗೌಡ್ರು ನನ್ನ ಪರ ನಿಲ್ಲಲು ಸಾಧ್ಯವಾಗಲ್ಲ. ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಮತ್ತು ಜನರಿಗೆ ಕರೆ ನೀಡಿದ್ದಾರೆ. ಇದನ್ನು ಓದಿ: ಮಗ ಮನೆಗೆ ಬರುತ್ತಿಲ್ಲ, ನಾನು ಅವನ ಪರ ಪ್ರಚಾರ ಮಾಡಲ್ಲ: ಬಚ್ಚೇಗೌಡ
ಇದೇ ವೇಳೆ ಕ್ಷೇತ್ರದಲ್ಲಿ 3 ಸಾವಿರ ವೋಟ್ ಇದ್ದ ಬಿಜೆಪಿ ಪಕ್ಷವನ್ನು ನಮ್ಮ ಕಾರ್ಯಕರ್ತರು ಬೆವರು ರಕ್ತ ಸುರಿಸಿ ಕಟ್ಟಿ ಬೆಳೆಸಿದರು. ಪೊಲೀಸ್ ಠಾಣೆಗಳಲ್ಲಿ ಕೇಸ್ ಗಳನ್ನು ಹಾಕಿಸಿಕೊಂಡು ಕೋರ್ಟ್ ಗಳಿಗೆ ಓಡಾಡಿದವರಿಗೆ ಇಂದು ವಂಚನೆಯಾಗಿದೆ. ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಸೀಟ್ ಸಿಕ್ಕಿಲ್ಲ ಎಂದು ಬಿಜೆಪಿ ಮೇಲೆ ಅಸಮಾಧಾನ ಹೊರಹಾಕಿದರು.