ಬೆಂಗಳೂರು: ಯೋಧರನ್ನು ಕಳೆದುಕೊಂಡು ಇಡೀ ದೇಶ ಮರುಗುತ್ತಿದ್ದ ವೇಳೆಯಲ್ಲೇ ಶಾಂತಿನಗರ ಶಾಸಕ ಹ್ಯಾರಿಸ್ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿಬಂದಿದೆ.
ಹೌದು. ಶಾಸಕ ಎನ್ ಎ ಹ್ಯಾರಿಸ್ ಈಗ ತಮ್ಮ ಜನ್ಮದಿನಕ್ಕಾಗಿ ಸರ್ಕಾರಿ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡ ಆರೋಪಕ್ಕೆ ಸಿಲುಕಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಶಾಸಕರು ತಮ್ಮ ಹುಟ್ಟುಹಬ್ಬಕ್ಕಾಗಿ ಕ್ಷೇತ್ರದ ಮತದಾರರಿಗೆ ರಾತ್ರೋರಾತ್ರಿ ಕಂಬಳಿಗಳನ್ನು ವಿತರಣೆ ಮಾಡಿದ್ರು. ಆದರೆ ಈ ಕಂಬಳಿಗಳನ್ನು ಅವರ ಕ್ಷೇತ್ರದಲ್ಲಿ ಬರುವ ಜೋಗುಪಾಳ್ಯದಲ್ಲಿರುವ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶೇಖರಣೆ ಮಾಡಿಟ್ಟಿದ್ದರು.
ಶಾಲೆಯ ಎರಡು ಕೊಠಡಿಗಳಲ್ಲಿ ಈ ಕಂಬಳಿಗಳ ರಾಶಿ ಇಡಲಾಗಿತ್ತು. ಇದರಿಂದ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೊಠಡಿಯಿಲ್ಲದೆ ಪಾಠಕ್ಕೆ ತೊಂದರೆಯಾಗಿದೆ. ಸಾಲದ್ದಕ್ಕೆ ರಾತ್ರಿ ವೇಳೆಯಲ್ಲೂ ಕ್ಷೇತ್ರದ ಮತದಾರರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಶಾಲೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಇದೇ ಶಾಲೆಗೆ ಅಂಟಿಕೊಂಡಿರುವ ರಸ್ತೆಗೆ ಫುಟ್ ಪಾತ್ ಇಲ್ಲ. ಮಕ್ಕಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಜೊತೆಗೆ ಶಾಲೆಯ ಎದುರೇ ಕಸದ ರಾಶಿ ಸದಾ ಬಿದ್ದಿರುತ್ತದೆ. ಇವೆಲ್ಲ ಸರಿ ಮಾಡದ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಶಾಲೆಯನ್ನೆ ದುರ್ಬಳಕೆ ಮಾಡಿಕೊಳ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪ್ರೇಮಿಗಳ ದಿನದಂದೇ ಉಗ್ರನ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಇಡೀ ದೇಶ ದುಃಖದಲ್ಲಿ ಮುಳುಗಿದ್ದಾಗ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಶಾಂತಿನಗರದ ಬಸ್ ನಿಲ್ದಾಣದಲ್ಲಿ ಅಬ್ಬರದ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿ ವಿವಾದಕ್ಕೆ ಗುರಿಯಾಗಿದ್ರು. ಈ ವಿವಾದ ಮರೆಯಾಗುವ ಮುನ್ನವೇ ಇದೀಗ ಮತ್ತೊಂದು ವಿವಾದ ಶಾಸಕರನ್ನು ಸುತ್ತಿಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv