ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ನಡುವೆಯಂತೂ ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರಾರ್ ಸಬ್ಜೆಕ್ಟ್ ಇರೋ ಸಿನಿಮಾಗಳ ದರ್ಬಾರ್ ಜೋರಾಗ್ತಿದೆ. ರೋಚಕ ಕಥೆ, ಟ್ವಿಸ್ಟ್ ಗಳ ಜೊತೆ ಪ್ರೇಕ್ಷಕರನ್ನು ಸೀಟಿನಂಚಿಗೆ ಕೂರಿಸೋ ಈ ಸಿನಿಮಾಗಳು ನೋಡುಗರಿಗೂ ಸಖತ್ ಥ್ರಿಲ್ ನೀಡುತ್ತವೆ. ಇದೀಗ ಅಂತಹದ್ದೇ ಜಾನರ್ ಸಿನಿಮಾವೊಂದು ಸದ್ದಿಲ್ಲದೇ ಸೆಟ್ಟೇರಿ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಅದುವೇ ‘ಶಿವನ ಪಾದ’.
ಹೌದು, ಸೀ ಶೋರ್ ಸ್ಟುಡಿಯೋಸ್ ಮೂಲಕ ನಂದೀಶ್ ಹೆಚ್.ಟಿ ಹಾಗೂ ಪೆರುಮಾಳ್ ವಿ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಸಿನಿಮಾವೇ ‘ಶಿವನ ಪಾದ’. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಒಂದಿಷ್ಟು ಹಾರಾರ್ ಹಾಗೂ ಕ್ರೈಂ ಸಬ್ಜೆಕ್ಟ್ ಈ ಚಿತ್ರದ ಕಥಾಹಂದರ. ಚಿತ್ರದ ಕ್ಯಾಪ್ಟನ್ ಮಾಚಂದ್ರು. ಕನ್ನಡದಲ್ಲಿ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು ತಮಿಳಿನಲ್ಲಿ ಕಾದಲ್ ಪೈತ್ಯಂ ಸಿನಿಮಾ ನಿರ್ದೇಶಿಸಿ ಚಿತ್ರರಂಗ ಹಾಗೂ ನಿರ್ದೇಶನಲ್ಲಿ ಪಳಗಿರುವ ಇವರ ಹೊಸ ಪ್ರಾಜೆಕ್ಟ್ ‘ಶಿವನ ಪಾದ’. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದ್ದೇ.
ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಕಂಪ್ಲೀಟ್ ಮಾಡಿ ಮುಂದಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ ಚಿತ್ರತಂಡ. ಎರಡು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನ ಹೌಸ್, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂದಿನ ವಾರದಿಂದ ಚಿತ್ರೀಕರಣಕ್ಕೆ ತೆರೆಳಲಿದೆ ಚಿತ್ರತಂಡ. ಇದನ್ನೂ ಓದಿ: ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ: ಧ್ರುವ ಸರ್ಜಾ
ಆರು ಜನರು ಹಾಗೂ ಒಂದು ಕೊಲೆಯ ಸುತ್ತ ನಡೆಯುವ ಕಥೆ ಚಿತ್ರಲ್ಲಿದೆ. ಚಿತ್ರಕ್ಕೆ ‘ಶಿವನ ಪಾದ’ ಹೆಸರಿಡಲು ಕಾರಣವೂ ಇದೆ. ಶಿವನ ಪಾದ ಉತ್ತರ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ. ಚಿತ್ರದ ಕಥೆಯ ಭಾಗ ಈ ತಾಣ ಆಗಿರೋದ್ರಿಂದ ಸಿನಿಮಾಕ್ಕೆ ಅದೇ ಹೆಸರನ್ನೇ ಇಡಲಾಗಿದೆ. ಚಿತ್ರದ ಮತ್ತೊಂದು ವಿಶೇಷ ಹೆಚ್.ಟಿ ಸಾಂಗ್ಲೀಯಾನ. ಹೌದು, ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ ಸಾಂಗ್ಲಿಯಾನ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ, ಬಾಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹ ಮೂರ್ತಿ, ಸೂರಿ, ಹೇರಂಭಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಚಿತ್ರಕ್ಕಿದೆ.