ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಬಹು ನಿರೀಕ್ಷಿತ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಅಚ್ಚರಿಗೀಡು ಮಾಡಿದ್ದ ಈ ಸಿನಿಮಾ ಇದೇ 22ರಂದು ತೆರೆಗಾಣಲಿದೆ. ಒಂದು ಸಿನಿಮಾ ಯಾವ ಯಾವ ರೀತಿಯಲ್ಲಿ ಸೆಳೆಯುವಂಥಾ ಕಂಟೆಂಟು ಹೊಂದಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇದುವರೆಗೆ ಪ್ರೇಕ್ಷಕರು ಅಂದುಕೊಂಡಿರುವಂತೆ, ಮೊನ್ನೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಕಾಣಿಸಿದಂತೆ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಧಾಟಿಯ ಕಥಾನಕವನ್ನೊಳಗೊಂಡಿದೆ ಅಂತಲೇ ಹೇಳಲಾಗುತ್ತದೆ. ನೋಡುಗರನ್ನು ಕ್ಷಣ ಕ್ಷಣವೂ ಕ್ಯೂರಿಯಾಸಿಟಿಯ ಕಮರಿಗೆ ತಳ್ಳುವಂತಹ ರೋಚಕ ಕಥೆಯನ್ನೊಳಗೊಂಡಿರೋ ಈ ಕಥೆಗೆ ಶೀರ್ಷಿಕೆಗೆ ತಕ್ಕುದಾದ ಛಾಯೆಯೂ ಇದೆ. ಒಂದು ಜನರೇಷನ್ನಿನ ಒಟ್ಟಾರೆ ಮನೋ ಪಲ್ಲಟಗಳನ್ನೂ ಕೂಡ ಈ ಕಥೆಯೊಂದಿಗೆ ಬೆರೆಸಲಾಗಿದೆ. ಅದುವೇ ಈ ಸಿನಿಮಾದ ಪ್ರಧಾನ ಅಂಶವೆಂದರೂ ತಪ್ಪಲ್ಲ.
Advertisement
ಮನರೂಪ ಸಿನಿಮಾ 1980 ರಿಂದ 2000ದ ನಡುವಿನ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಅಥವಾ ಮಿಲೆನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು ಮನರೂಪ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗಿಯೇ ಉಳಿಯಲು ಇಚ್ಛಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇಲ್ಲಿದೆ.
Advertisement
Advertisement
ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಕಿರಣ್ ಹೆಗ್ಡೆ ಹಲವಾರು ವರ್ಷಗಳ ಕಾಲ ಕಾಡಿಸಿಕೊಂಡು, ಅದಕ್ಕಾಗಿ ತಯಾರಾಗಿ, ವರ್ಷಗಟ್ಟಲೆ ಶ್ರಮವಹಿಸಿ ರೂಪಿಸಿರೋ ಚಿತ್ರ ಮನೋರೂಪ. ಅದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲು ದಿನಗಣನೆ ಶುರುವಾಗಿದೆ.