ದಶಕಗಳ ಹಿಂದೆ ಮುಂಗಾರುಮಳೆ ಚಿತ್ರ ಹಾಡಿನ ಮೂಲಕ ಹೊಸಾ ತರಂಗವೆಬ್ಬಿಸಿ ಸೂಪರ್ ಹಿಟ್ ಆಗಿತ್ತಲ್ಲಾ? ಅಂಥಾದ್ದೇ ಆವೇಗದೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿರೋ ಸಿನಿಮಾ ಬದ್ರಿ ವರ್ಸಸ್ ಮಧುಮತಿ. ಈ ಚಿತ್ರದ ಮೂಲಕ ಪ್ರತಾಪವನ್ ಎಂಬ ಪ್ರತಿಭಾವಂತ ನಾಯಕ ನಟನ ಆಗಮನವಾಗಲು ಇದೀಗ ಕ್ಷಣಗಣನೆ ಆರಂಭವಾಗಿದೆ.
ಬದ್ರಿ ವರ್ಸಸ್ ಮಧುಮತಿ ಚಿತ್ರವೀಗ ಜನರ ಗಮನ ಸೆಳೆದಿರೋದೇ ಚೆಂದದ ಹಾಡುಗಳ ಕಾರಣದಿಂದಾಗಿ. ಜಯಂತ್ ಕಾಯ್ಕಿಣಿಯವರು ಬರೆದ ನವಿರಾದ ಹಾಡುಗಳು ಮುಂಗಾರು ಮಳೆಯ ಇತಿಹಾಸ ಪುನರಾವರ್ತನೆಯಾಗೋ ಲಕ್ಷಣಗಳನ್ನೇ ಧ್ವನಿಸುತ್ತಿದೆ. ಇದರಲ್ಲಿನ ಒಟ್ಟು ಮೂರು ಹಾಡುಗಳನ್ನು ಕಾಯ್ಕಿಣಿ ಬರೆದಿದ್ದಾರೆ. ಆ ಮೂರೂ ಹಾಡುಗಳು ಸೃಷ್ಟಿಸುತ್ತಿರೋ ಕ್ರೇಜ್ ನೋಡಿದರೇನೇ ಈ ಹೊಸಬರ ತಂಡ ಹೊಸಾ ಕಮಾಲನ್ನೇ ಸೃಷ್ಟಿಸೋ ಲಕ್ಷಣಗಳು ನಿಚ್ಚಳವಾಗುತ್ತದೆ.
Advertisement
Advertisement
ಇದು ಪ್ಯೂರ್ ಲವ್ ಸ್ಟೋರಿ ಹೊಂದಿರೋ ಚಿತ್ರ. ಆದರೆ ಪ್ರೇಕ್ಷಕರನ್ನು ಮುದಗೊಳಿಸುವಂಥಾ ನಾನಾ ಅಂಶಗಳನ್ನು ಬದ್ರಿ ವರ್ಸಸ್ ಮಧುಮತಿ ಹೊಂದಿದೆ ಅನ್ನೋದು ಚಿತ್ರತಂಡದ ಮಾತು. ಭಿನ್ನ ಪಥದ ಚಿತ್ರವಾಗಿ ದಾಖಲಾಗುವ ಸೂಚನೆ ರವಾನಿಸುತ್ತಿರೋ ಈ ಚಿತ್ರ, ನಾಯಕ ಕಂ ನಿರ್ಮಾಪಕ ಪ್ರತಾಪವನ್ ಅವರ ಅದೆಷ್ಟೋ ವರ್ಷಗಳ ಸಿನಿಮಾ ಧ್ಯಾನದ ಫಲ. ಈ ಹಾದಿಯಲ್ಲಿ ಅವರು ಅನೇಕ ನಿರಾಸೆಗಳನ್ನು ಕಂಡಿದ್ದಾರೆ. ಆದರೂ ಭರಪೂರವಾದ ತಯಾರಿ ಅವರ ಬೆನ್ನಿಗಿದ್ದಿದ್ದರಿಂದಾಗಿ ಈ ಸಿನಿಮಾ ಆರಂಭಿಸಿ ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾರೆ. ಇದು ಈ ತಿಂಗಳಲ್ಲಿಯೇ ತೆರೆ ಕಾಣೋದು ಬಹುತೇಕ ಖಚಿತವಾಗಿದೆ.
Advertisement
Advertisement
ಯಾವುದೇ ಕನಸಾಗಿದ್ದರೂ ಅದೆಷ್ಟೋ ಗಾವುದ ದೂರ ನಡೆಯದೆ, ನೋವು ನಿರಾಸೆಗಳನ್ನು ಅನುಭವಿಸದೇ ಕೈಗೆಟುಕೋದಿಲ್ಲ. ಪ್ರತಾಪವನ್ ವಿಚಾರದಲ್ಲಿಯೂ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ ಈ ಸಿನಿಮಾ ಮೂಲಕ ನಾಯಕನಾಗಿ ಹೊರಹೊಮ್ಮಿರುವ ಅವರು ಸಾಗಿ ಬಂದ ದಾರಿಯೇ ಅಂಥಾದ್ದಿದೆ. ಚಿಕ್ಕಬಳ್ಳಾಪುರ ಮೂಲದ ಪ್ರತಾಪವನ್ ಶಾಲಾ ದಿನಗಳಲ್ಲಿಯೇ ಕಲೆಯತ್ತ ಆಸಕ್ತಿ ಹೊಂದಿದ್ದವರು. ಶಿಕ್ಷಕರೂ ಸೇರಿದಂತೆ ಎಲ್ಲರನ್ನೂ ಡಿಟ್ಟೋ ಅನುಕರಣೆ ಮಾಡಿ ತೋರಿಸೋ ಮೂಲಕ ಎಲ್ಲರಿಗಿಂತಲೂ ಭಿನ್ನ ಅನ್ನಿಸಿಕೊಂಡಿದ್ದರು. ಹೀಗೆ ಅವರೊಳಗಿನ ಕಲೆ ಸಿನಿಮಾ ದಿಕ್ಕಿನತ್ತ ದಾರಿ ತೋರಿದ್ದೂ ಕೂಡಾ ಅಚ್ಚರಿದಾಯಕವೇ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಯೋಟೆಕ್ ಬಿಎಸ್ ಸಿ ಪದವಿ ಪೂರೈಸಿದ್ದ ಪ್ರತಾಪವನ್, ಅನಿವಾರ್ಯತೆಗೆ ಬಿದ್ದು ಆಸಕ್ತಿಗೆ ವಿರುದ್ಧವಾದ ಕೆಲಸವನ್ನೇ ಆರಂಭಿಸಿದ್ದರು. ಸಹೋದರನ ಜೊತೆ ಸೇರಿಕೊಂಡು ಇಂಡಿಯಾ ಇನ್ಫೋಲೈನ್ ಎಂಬ ಕಂಪೆನಿ ಹುಟ್ಟು ಹಾಕಿ ಅದರಲ್ಲಿ ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು. ಇದರಲ್ಲಿಯೇ ಕಳೆದು ಹೋಗುತ್ತಿದ್ದ ಅವರನ್ನು ಮತ್ತೆ ಕಲೆಯ ತೆಕ್ಕೆಗೆ ಬೀಳಿಸಿದ್ದು ಅವರ ಅಮ್ಮ. ಮಗನೊಳಗಿನ ಕಲಾಸಕ್ತಿಯನ್ನು ನೋಡಿಕೊಂಡೇ ಬಂದಿದ್ದ ಆ ತಾಯಿಗೆ ತನ್ನ ಮಗ ಸಿನಿಮಾ ತಾರೆಯಾಗಬೇಕೆಂಬ ಆಸೆ. ಆದ್ದರಿಂದ ಅವರೇ ಹೀರೋ ಆಗುವಂತೆ ಮಗನನ್ನು ಪ್ರೇರೇಪಿಸಲಾರಂಭಿಸಿದ್ದರು. ಆದರೆ ಸರಿಯಾದ ನೆರಳಿಲ್ಲದೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಕಷ್ಟ ಅಂತ ಪ್ರತಾಪವನ್ ಹೇಳಿದಾಗೆಲ್ಲ, ಸ್ಫೂರ್ತಿದಾಯಕ ಕಥೆಗಳನ್ನು ಹೇಳಿ ಉತ್ತೇಜಿಸಲಾರಂಭಿಸಿದ್ದರು. ಇದರಿಂದ ತಮ್ಮ ಬದುಕಿನ ದಾರಿಯನ್ನು ಸ್ಪಷ್ಟಪಡಿಸಿಕೊಂಡ ಪ್ರತಾಪವನ್ ಕಂಪೆನಿಯನ್ನು ಅಣ್ಣನ ಸುಪರ್ದಿಗೊಪ್ಪಿಸಿ ನಾಯಕನಾಗೋ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದ್ದರು.
ಏನೇ ಮಾಡಿದರೂ ಸಂಪೂರ್ಣ ತಯಾರಿಯ ಜೊತೆಗೇ ಅಖಾಡಕ್ಕಿಳಿಯಬೇಕನ್ನೋದು ಪ್ರತಾಪವನ್ ಅವರ ಅಭಿಲಾಷೆ. ಅದರಂತೆಯೇ ಇಂಡಿಯಾದ ಖ್ಯಾತ ನಟನಾ ತರಬೇತಿ ಸಂಸ್ಥೆಯಾದ ಸತ್ಯಾನಂದ ಆಕ್ಟಿಂಗ್ ಇನ್‍ಸ್ಟಿಟ್ಯೂಟ್ ಗೆ ಸೇರಲು ನಿರ್ಧರಿಸಿದ್ದರು. ವಿಶಾಖಪಟ್ಟಣಂನಲ್ಲಿರೋ ಈ ಸಂಸ್ಥೆಗೆ ಹೇಗೋ ಸೇರಿಕೊಂಡು ಅದರ ಸಂಸ್ಥಾಪಕರಾದ ಸತ್ಯಾನಂದ ಅವರಿಗೂ ಹತ್ತಿರಾಗಿದ್ದರು. ಈ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದ ಬಹುತೇಕರು ಸ್ಟಾರ್ ಗಳಾಗಿದ್ದಾರೆ. ತೆಲುಗಿನ ಪವನ್ ಕಲ್ಯಾಣ್, ಪ್ರಭಾಸ್ ಸೇರಿದಂತೆ ಅನೇಕರು ಇಲ್ಲಿಂದಲೇ ಬೆಳಕು ಕಂಡವರು. ಅಂಥಾ ತರಬೇತಿ ಸಂಸ್ಥೆಯಲ್ಲಿ ನಿಷ್ಠೆಯಿಂದ ಕಲಿತ ಇವರನ್ನು ಸತ್ಯಾನಂದ ಅವರೇ ಮೆಚ್ಚಿಕೊಂಡಿದ್ದರು. ಪವನ್ ಕಲ್ಯಾಣ್ ನಂತರ ನೀನೇ ಇಷ್ಟ ಅನ್ನುತ್ತಾ ಪ್ರೀತಿ ತೋರಿಸುತ್ತಲೇ ನೀನು ಕನ್ನಡದ ಪವನ್ ಕಲ್ಯಾಣ್ ಆಗ್ತೀಯ ಎಂಬ ಆಶೀರ್ವಾದದೊಂದಿಗೇ ಬೀಳ್ಕೊಟ್ಟಿದ್ದರು.
ಹಾಗೆ ಭರವಸೆ ತುಂಬಿಕೊಂಡು ನಟನಾಗಿ ಹೊರ ಬಂದ ಪ್ರತಾಪವನ್ ಮುಂದೆ ಹೊಸಾ ಜಗತ್ತೊಂದು ಅನಾವರಣಗೊಂಡಿತ್ತು. ಆ ಬಳಿಕ ಅದೆಷ್ಟೋ ಆಡಿಷನ್ನುಗಳನ್ನು ಅವರು ಪಾಸ್ ಮಾಡಿದ್ದರು. ಆದರೆ ಬಹುತೇಕರು ಹಣ ಕಾಸಿನ ಬೇಡಿಕೆ ಇಡೋ ಮೂಲಕ ರೇಜಿಗೆ ಹುಟ್ಟಿಸಿದ್ದರಂತೆ. ಹಾಗೆ ಕಂಗಾಲಾಗಿ ಕೂತಿದ್ದಾಗಲೇ ಶಂಕರನಾರಾಯಣ ರೆಡ್ಡಿಯವರು ಸಿಕ್ಕಿದ್ದರು. ಅವರು ಅದಾಗಲೇ ಚಿತ್ರರಂಗದಲ್ಲಿ ರೈಟರ್ ಆಗಿ ಹೆಸರು ಮಾಡಿದ್ದವರು. ಅವರು ಹೇಳಿದ ಕಥೆಯ ಸೊಗಸು ಕೇಳಿ ಅಣ್ಣ ಪ್ರದೀಪ್ ಮತ್ತು ಗೆಳೆಯ ಧ್ರುವಜಿತ್ ರೆಡ್ಡಿ ಜೊತೆ ಸೇರಿ ತಾವೇ ನಿರ್ಮಾಣ ಮಾಡುವ ಮನಸು ಮಾಡಿದ್ದರು. ಈ ನಿರ್ಧಾರದಿಂದಲೇ ಬದ್ರಿ ವರ್ಸಸ್ ಮಧುಮತಿ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು.
ಇಂಥಾ ನಾನಾ ಸವಾಲುಗಳಿಗೆ ಎದೆ ಕೊಟ್ಟರೂ ಸಿನಿಮಾ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕರಾಗಿ ಪ್ರತಾಪವನ್ ನಟಿಸಿದ್ದಾರೆ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ವಹಿಸಿದ್ದಾರೆ. ಅದೆಲ್ಲವೂ ಮಹಾ ಗೆಲುವೊಂದರ ಮೂಲಕ ಸಾರ್ಥಕಗೊಳ್ಳೋ ಕ್ಷಣಗಳು ಹತ್ತಿರದಲ್ಲಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv