ಬೆಂಗಳೂರು: ಈ ಸಿನಿಮಾ ಎಂಬ ಮಾಯೆ ಯಾರನ್ನು ಯಾವ ದಿಕ್ಕುಗಳಿಂದ ಸೆಳೆದು ತರುತ್ತದೆಂಬುದನ್ನು ಸಲೀಸಾಗಿ ಊಹಿಸಲು ಸಾಧ್ಯವಿಲ್ಲ. ಜೀವನದ ಅನಿವಾರ್ಯತೆ ಅದೆತ್ತ ಎಸೆದರೂ, ಯಾವ ಹುದುಲಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರೂ ಸಿನಿಮಾ ಆಕಾಂಕ್ಷೆಯೆಂಬುದು ತಾನೇ ತಾನಾಗಿ ಬರಸೆಳೆದುಕೊಳ್ಳುತ್ತೆ. ಅದಕ್ಕೆ ಬೇಕಾದಂಥಾ ಪರಿಶ್ರಮ, ಪ್ರತಿಭೆಗಳಿದ್ದರೆ ಅಂಥವರ ಹೆಜ್ಜೆಗುರುತು ಕೂಡಾ ಗೆಲುವಾಗಿ ಮೂಡಿಕೊಳ್ಳುತ್ತದೆ. ಇದೀಗ ತನ್ನ ಶೀರ್ಷಿಕೆ ಮತ್ತು ಕಥೆಯ ಹೊಳಹುಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ‘ಕಡೆಮನೆ’ ಎಂಬ ಚಿತ್ರದ ನಿರ್ಮಾಪಕರಾದ ನಂದನ್ ಅವರದ್ದೂ ಕೂಡ ಇದೇ ವೆರೈಟಿಯ ಕಥನ. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಲೇ ಸಿನಿಮಾ ಕನಸು ಕಂಡ ಅವರೀಗ ಯಶಸ್ವಿ ನಿರ್ಮಾಪಕರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ.
ನಂದನ್ ಪಾಲಿಗೆ ಕಡೆಮನೆ ಚೊಚ್ಚಲ ನಿರ್ಮಾಣದ ಚಿತ್ರ. ನಿರ್ದೇಶಕ ವಿನಯ್ ಪಾಲಿಗೂ ಇದು ಮೊದಲ ಸಿನಿಮಾ. ಹೊಸಬರ ತಂಡ, ಫ್ರೆಶ್ ಆದ ಹಾರರ್ ಕಥನದ ಮೂಲಕ ಗೆಲುವಿನ ಭರವಸೆಯಿಟ್ಟುಕೊಂಡಿರೋ ಇಡೀ ತಂಡವನ್ನು ನಂದನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಮೂಲತಃ ನಂಜನಗೂಡಿನವರಾದ ನಂದನ್ ದಶಕಗಳ ಹಿಂದೆ ತುಮಕೂರಿಗೆ ಬಂದು ಅಲ್ಲಿಯೇ ಬದುಕು ಕಟ್ಟಿಕೊಂಡವರು. ಹಾಡುವ ಕಲೆ ಸಿದ್ಧಿಸಿದ್ದರಿಂದ ಈ ಭಾಗದ ಆರ್ಕೆಸ್ಟ್ರಾ ತಂಡಗಳಲ್ಲಿ ಹಾಡುವುದನ್ನೇ ಅನ್ನದ ಮೂಲವಾಗಿಸಿಕೊಂಡಿದ್ದ ನಂದನ್ ಪಾಲಿಗೆ ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಸಿನಿಮಾಗಳೇ ಬಣ್ಣದ ಲೋಕದತ್ತ ಆಸಕ್ತಿ ಹುಟ್ಟಿಕೊಳ್ಳುವಂತೆ ಮಾಡಿದ್ದವು.
ಆರ್ಕೆಸ್ಟ್ರಾಗಳಲ್ಲಿ ಹಾಡೋದನ್ನೇ ಹವ್ಯಾಸವಾಗಿಸಿಕೊಂಡಿದ್ದ ನಂದನ್ ತಮ್ಮ ಕಾರ್ಯಕ್ಷೇತ್ರದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ಅದನ್ನು ಜೀರ್ಣಿಸಿಕೊಳ್ಳಲೂ ಆಗದೆ, ಬದಲಾಯಿಸಲೂ ಆಗದೆ ಸಂದಿಗ್ಧ ಸ್ಥಿತಿ ತಲುಪಿಕೊಂಡಿದ್ದರು. ಬಹುತೇಕ ಹಾಡುಗಾರರಂತೆ ನಂದನ್ ಪಾಲಿಗೂ ಆರ್ಕೆಸ್ಟ್ರಾ ಎಂಬುದು ಕಲೆಯ ಅನಾವರಣಕ್ಕಿರೋ ವೇದಿಕೆ. ಆದರೆ ನೋಡನೋಡುತ್ತಲೇ ಡ್ಯಾನ್ಸು, ಸೌಂಡಿನ ಭರಾಟೆ ಹಾಡನ್ನು ಮರೆಮಾಚಲು ಶುರು ಮಾಡಿದಾಗ ಮೆಲ್ಲಗೆ ಬೇರೆಡೆಗೆ ಹೊರಳಿಕೊಂಡಿದ್ದ ಅವರ ಪಾಲಿಗೆ ಪ್ರಧಾನ ಕನಸಾಗಿ ಕಾಡಲಾರಂಭಿಸಿದ್ದು ಸಿನಿಮಾ. ತಾನೂ ಕೂಡ ಜನ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಿನಿಮಾ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದ ಅವರ ಪಾಲಿಗೆ ಅದು ನನಸಾಗೋ ಸಂದರ್ಭ ಕೂಡಿ ಬಂದಿದ್ದು ಕೂಡ ಆಕಸ್ಮಿಕವಾಗಿಯೇ.
ನಂದನ್‍ರಿಗೆ ತುಮಕೂರಿನವರೇ ಆದ ನಿರ್ದೇಶಕ ವಿನಯ್ ಎಂಬ ಪ್ರತಿಭಾವಂತ ಹುಡುಗನ ಪರಿಚಯವಾಗಿದ್ದು ಮನೆ ಬಳಿಯ ಹೋಟೆಲೊಂದರಲ್ಲಿ. ಅದಾಗಲೇ ಸೈಕಾಲಜಿಯಲ್ಲಿ ಎಂಎಸ್‍ಸಿ ಮಾಡಿಕೊಂಡಿದ್ದ ವಿನಯ್ ಸಿನಿಮಾ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ಸ್ಕ್ರಿಪ್ಟ್ ವರ್ಕನ್ನೂ ಮುಗಿಸಿಕೊಂಡು ನಿರ್ಮಾಪಕರಿಗಾಗಿ ಕಾಯುತ್ತಿದ್ದರು. ನಂದನ್ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿ ಒಂದೊಳ್ಳೆ ಕಥೆಗಾಗಿ ಹುಡುಕುತ್ತಿದ್ದರು. ಇವರಿಬ್ಬರೂ ಹೋಟೆಲೊಂದರಲ್ಲಿ ಸಂಧಿಸಿ, ಅಲ್ಲಿಯೇ ಪರಿಚಯವಾಗಿ ಆತ್ಮೀಯತೆ ಚಿಗುರಿಕೊಂಡ ನಂತರ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಲಾರಂಭಿಸಿದ್ದರು. ಬಳಿಕ ವಿನಯ್ ಹೇಳಿದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡ ನಂದನ್ ಗ್ರೀನ್ ಸಿಗ್ನಲ್ ನೀಡಿದ್ದರು. ಈವತ್ತಿಗೆ ಹೊಸ ಅಲೆಯ ಚಿತ್ರವಾಗಿ ಗಮನ ಸೆಳೆದಿರುವ ‘ಕಡೆಮನೆ’ ಜೀವ ಪಡೆದದ್ದು ಅಲ್ಲಿಂದಲೇ!
ಹಳ್ಳಿ ಬೇಸಿನ ಕಥೆ ಹೊಂದಿರೋ ಈ ಚಿತ್ರ ನಮ್ಮ ಕಣ್ಣೆದುರೇ ಮರೆಯಾಗುತ್ತಿರೋ ಅದೆಷ್ಟೋ ವಿಚಾರಗಳನ್ನೊಳಗೊಂಡಿದೆಯಂತೆ. ಹಾರರ್ ಶೈಲಿಯದ್ದಾದರೂ ಅಪರೂಪದ, ಗಟ್ಟಿ ಕಥೆಯನ್ನೊಳಗೊಂಡಿರೋ ಕಡೆಮನೆಯನ್ನು ನಂದನ್ ಕೀರ್ತನಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ.