ಗುರುದೇಶಪಾಂಡೆ ಕನಸಿನ ಸಿನಿಮಾ ಶಾಲೆ ಜಿ ಅಕಾಡೆಮಿ!

Public TV
2 Min Read
G Academy final

ಬೆಂಗಳೂರು: ರಾಜಾಹುಲಿಯಂಥಹ ಹಿಟ್ ಚಿತ್ರವನ್ನು ಕೊಟ್ಟಿರೋ ನಿರ್ದೇಶಕ ಗುರುದೇಶಪಾಂಡೆ ಇದೀಗ ನಿರ್ಮಾಪಕರಾಗಿಯೂ ಹೊಸ ಯಾನ ಆರಂಭಿಸಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿರುವ ಅವರ ಪಾಲಿಗೆ ಚಿತ್ರರಂಗದ ಒಳಹೊರಗಿನ ಆಳವಾದ ಪರಿಚಯವಿದೆ. ಸಿನಿಮಾ ಬಗ್ಗೆ ಎಲ್ಲ ದಿಕ್ಕಿನಿಂದಲೂ ತಿಳಿದುಕೊಂಡೇ ಯುವ ಪ್ರತಿಭೆಗಳು ಸಿನಿಮಾ ಮಾಡುವಂತಾಗಬೇಕೆಂಬುದು ಗುರು ದೇಶಪಾಂಡೆಯವರ ಬಹುಕಾಲದ ಕನಸು. ಆದರೆ ಅದಕ್ಕೆ ಸುಸಜ್ಜಿತವಾದ ಅವಕಾಶಗಳಿಲ್ಲ ಎಂಬುದನ್ನು ಮನಗಂಡಿರುವ ಅವರೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದರ ಫಲವಾಗಿ ಸಿನಿಮಾಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ತಯಾರು ಮಾಡುವಂಥಹ ಜಿ ಸಿನಿಮಾಸ್ ಸಿನಿಮಾ ತರಬೇತಿ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ.

ಎಲ್ಲ ಕ್ಷೇತ್ರಗಳಿಗೂ ಶೈಕ್ಷಣೀಯವಾಗಿ ತಯಾರು ಮಾಡುವಂಥಹ ವ್ಯವಸ್ಥೆ ಇದೆ. ಆದರೆ ಸಿನಿಮಾಗೆ ಮಾತ್ರ ಅಂತಹ ಯಾವ ಸುಸಜ್ಜಿತವಾದ ವ್ಯವಸ್ಥೆಗಳೂ ಇಲ್ಲ. ಆ ಕೊರತೆಯನ್ನು ನೀಗಿ ಪ್ರತಿಭಾವಂತರಿಗೆ ಸಿನಿಮಾ ಕನಸನ್ನು ಸಲೀಸು ಮಾಡುವ ಉದ್ದೇಶದೊಂದಿಗೇ ಜಿ ಅಕಾಡೆಮಿಗೆ ಚಾಲನೆ ಸಿಕ್ಕಿದೆ. ಇದೇ ತಿಂಗಳ 25ರಂದು ಜಿ ಅಕಾಡೆಮಿಯ ತರಗತಿಗಳೆಲ್ಲ ಆರಂಭವಾಗಲಿವೆ. ಅದರೊಳಗಾಗಿ ಆಸಕ್ತರು ದಾಖಲಾತಿ ಪಡೆದುಕೊಳ್ಳಬಹುದು. ಯಾರಿಗೆ ಯಾವ ವಿಭಾಗದಲ್ಲಿಯೇ ಆಸಕ್ತಿ ಇದ್ದರೂ ಅನುಭವಸ್ಥರಿಂದಲೇ ಪಾಠ ಹೇಳಿಸಿಕೊಂಡು, ಪ್ರಾಕ್ಟಿಕಲ್ ಆಗಿಯೂ ತಯಾರಾಗುವಂಥಾ ಅದ್ಭುತ ಅವಕಾಶವನ್ನು ಗುರುದೇಶಪಾಂಡೆ ಈ ಮೂಲಕ ಕಲ್ಪಿಸಿದ್ದಾರೆ.

ಕೆ.ಮಂಜು, ಉದಯ್.ಕೆ ಮೆಹ್ತಾ, ನಿರ್ದೇಶಕರಾದ ದಯಾಳ್ ಪದ್ಮನಾಭನ್, ಭರ್ಜರಿ ಚೇತನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಬಿ.ಎಂ.ಗಿರಿರಾಜ್, ಮೌನೇಶ್ ಬಡಿಗೇರ್, ನವೀನ್ ಕೃಷ್ಣ, ಕೆಂಪರಾಜು, ಕೆ.ಎಸ್.ಚಂದ್ರಶೇಖರ್, ಆರ್.ಜೆ.ನೇತ್ರಾ, ಹೇಮಲತಾ, ಸಂತೋಷ್ ನಾಯಕ್, ಮದನ್-ಹರಿಣಿ, ಗಿರೀಶ್, ಡಿಫರೆಂಟ್ ಡ್ಯಾನಿ, ದೀಪಕ್ ಮತ್ತು ಶ್ರೀನಿವಾಸ್ ಸೇರಿದಂತೆ ಅತಿರಥ ಮಹಾರಥರೆಲ್ಲ ಆಯಾ ವಿಭಾಗಕ್ಕೆ ಬೋಧಿಸಲಿದ್ದಾರೆ. ಹೀಗೆ ನಿರ್ದೇಶನ, ನಿರ್ಮಾಣ ಸೇರಿದಂತೆ ಎಲ್ಲದರಲ್ಲಿಯೂ ಸಂಪೂರ್ಣವಾಗಿ ಪಳಗಿಕೊಳ್ಳುವಂತೆ ಮಾಡಬಲ್ಲ ಭರವಸೆಯನ್ನು ಜಿ ಸಿನಿಮಾಸ್ ನೀಡುತ್ತಿದೆ. ನಾಗರಬಾವಿಯ ದೀಪಾ ಕಾಂಪ್ಲೆಕ್ಸ್ ಸಮೀಪದಲ್ಲಿ ಸುಸಜ್ಜಿತವಾಗಿ ಜಿ ಅಕಾಡೆಮಿ ತರಗತಿಗಳು ನಡೆಯಲಿವೆ.

ಗುರು ದೇಶಪಾಂಡೆ ನಿರ್ದೇಶಕರಾಗಿ ಇದೀಗ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ಶಿಬಿರಾರ್ಥಿಗಳಾಗಿರುವ ಪ್ರತಿಭಾವಂತರನ್ನು ತಮ್ಮ ಅನುಭವದ ಆಧಾರದಲ್ಲಿ ಎಲ್ಲ ನಿಟ್ಟಿನಲ್ಲಿಯೂ ಪರ್ಫೆಕ್ಟ್ ಎಂಬಂತೆ ರೂಪಿಸೋ ಹಂಬಲ ಅವರಲ್ಲಿದೆ. ಒಟ್ಟಾರೆಯಾಗಿ ಜಿ ಅಕಾಡೆಮಿ ಮೂಲಕ ಎಲ್ಲ ವಿಭಾಗಗಳನ್ನು ಅರಿತುಕೊಂಡ ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡುವ ಮಹತ್ವಾಕಾಂಕ್ಷೆ ಗುರುದೇಶಪಾಂಡೆಯವರಿಗಿದೆ.

Share This Article
Leave a Comment

Leave a Reply

Your email address will not be published. Required fields are marked *