ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಹೌರಾಬ್ರಿಡ್ಜ್ ಎಂಬ ಚಿತ್ರ ದೇವಕಿಯಾಗಿ ಶೀರ್ಷಿಕೆ ಬದಲಾಯಿಸಿಕೊಂಡಿರೋದು ಗೊತ್ತೇ ಇದೆ. ಲೋಹಿತ್ ನಿರ್ದೇಶನದ ಈ ಚಿತ್ರ ಆರಂಭ ಕಾಲದಿಂದಲೂ ಸಕಾರಾತ್ಮಕವಾಗಿ ಸುದ್ದಿಯಾಗುತ್ತಾ ಬಂದಿದೆ. ಈ ಹಿಂದೆ ಮಮ್ಮಿ ಎಂಬ ಹಿಟ್ ಚಿತ್ರ ನೀಡಿದ್ದ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ದೇವಕಿಯ ಮೂಲಕ ಮತ್ತೊಂದು ಗೆಲುವು ದಾಖಲಿಸುವ ಉತ್ಸಾಹದಿಂದಿದ್ದಾರೆ.
Advertisement
ಯುವ ನಿರ್ದೇಶಕ ಲೋಹಿತ್ ಮಮ್ಮಿ ಎಂಬ ಹಾರರ್ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದರು. ಈ ಮೂಲಕವೇ ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಅವರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದರು.
Advertisement
ಪ್ರಿಯಾಂಕಾ ಎರಡನೇ ಸಲವೂ ಲೋಹಿತ್ ನಿರ್ದೇಶನದ ದೇವಕಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಲು ಮನಸು ಮಾಡಿರೋದೇ ಕಥೆಯ ಕಾರಣಕ್ಕಾಗಿಯಂತೆ. ಅವರು ಯಾವ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡಿದ್ದರೋ, ಅದನ್ನು ನಿವಾಳಿಸಿ ಎಸೆಯುವಂಥಾ ವಿಶೇಷತೆಗಳೊಂದಿಗೇ ದೇವಕಿ ಚಿತ್ರ ರೂಪುಗೊಂಡಿದೆ.
Advertisement
Advertisement
ಕಥೆಯ ವಿಚಾರ ಹಾಗಿರಲಿ. ಚಿತ್ರೀಕರಣಗೊಂಡ ದೃಷ್ಟಿಯಿಂದಲೂ ದೇವಕಿ ಹಲವಾರು ವಿಶೇಷತೆಗಳು, ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಉಳಿಕೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರೋ ದೇವಕಿ ಚಿತ್ರ ಉಳಿದೆಲ್ಲ ಅಂಶಗಳೊಂದಿಗೆ ಮನಮಿಡಿಯುವ ಕಥಾನಕವೊಂದನ್ನು ಹೊಂದಿದೆ.
ವಿಶೇಷ ಅಂದರೆ, ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಪುತ್ರಿ ಐಶ್ವರ್ಯಾ ಈ ಚಿತ್ರದ ಮೂಲಕ ಮೊದಲ ಸಲ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿಯೂ ಪ್ರಿಯಾಂಕಾ ಮಗಳಾಗಿಯೇ ನಟಿಸಿದ್ದಾರಂತೆ. ಮಗಳನ್ನು ಕಳೆದುಕೊಂಡ ತಾಯಿಯೊಬ್ಬಳು ಆಕೆಗಾಗಿ ಹೇಗೆಲ್ಲ ಹಂಬಲಿಸುತ್ತಾಳೆಂಬ ಕಥಾನಕ ಇಲ್ಲಿದೆ. ಆದರೆ ಥ್ರಿಲ್ಲರ್ ಜಾಡಿನಲ್ಲಿ ಸಾಗೋ ಈ ಕಥೆ ಕ್ಷಣ ಕ್ಷಣವೂ ಪ್ರೇಕ್ಷಕರನ್ನು ಕಾಡುತ್ತಾ, ಎಲ್ಲ ಅಂದಾಜುಗಳನ್ನೂ ತಲೆ ಕೆಳಗಾಗಿಸುತ್ತಾ ರೋಚಕ ವಾಗಿ ಸಾಗುತ್ತದೆಯಂತೆ.
ಇನ್ನುಳಿದಂತೆ ದೇವಕಿಯ ಇನ್ನಷ್ಟು ವಿಶೇಷತೆಗಳು ಚಿತ್ರೀಕರಣ ನಡೆದ ರೀತಿಯಲ್ಲಿಯೇ ಇದೆಯಂತೆ. ದೇವಕಿಯ ಹೆಚ್ಚಿನ ಭಾಗದ ಚಿತ್ರೀಕರಣ ಕೊಲ್ಕತ್ತಾದಲ್ಲಿಯೇ ನಡೆದಿದೆ. ಇಲ್ಲಿರೋ ನೂರು ವರ್ಷಗಳಷ್ಟು ಹಳೆಯದಾದ ಸೌತ್ ಪಾರ್ಕ್ ಸಿಮೆಸ್ಟ್ರಿಯಲ್ಲಿ ದೇವಕಿಯ ಚಿತ್ರೀಕರಣ ನಡೆದಿದೆ. ಎಪ್ಪತ್ತರ ದಶಕದಲ್ಲಿಯೇ ಮುಚ್ಚಲ್ಪಟ್ಟಿದ್ದ ಈ ಸ್ಥಳದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಸತ್ತಾಗ ಸಮಾಧಿ ಮಾಡಲಾಗುತ್ತಿತ್ತಂತೆ.
ಈ ಸ್ಥಳದಲ್ಲಿ ಈವರೆಗೂ ಕೆಲವೇ ಕೆಲ ಚಿತ್ರಗಳ ಚಿತ್ರೀಕರಣ ನಡೆದಿದೆಯಷ್ಟೆ. ಸತ್ಯಜಿತ್ ರೇ ಮತ್ತು ಅಮಿತಾಭ್ ಬಚ್ಚನ್ ಅವರ ಒಂದೊಂದು ಚಿತ್ರಗಳಿಗಷ್ಟೇ ಇಲ್ಲಿ ಚಿತ್ರೀಕರಣ ನಡೆಸಲು ಅವಕಾಶ ಸಿಕ್ಕಿತ್ತಂತೆ. ಆದರೆ ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸ್ಥಳದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಮೊದಲ ಚಿತ್ರವಾಗಿಯೂ ದೇವಕಿ ದಾಖಲೆ ಬರೆದಿದೆ.