ನಟಿ ಅನುಪ್ರಭಾಕರ್ ಮದುವೆಯಾಗಿ ನಂತರ ಮಗುವೂ ಆಗಿ ಪುಟ್ಟ ಮಗಳ ಲಾಲನೆ ಪಾಲನೆಯಲ್ಲಿ ಕಳೆದು ಹೋಗಿದ್ದಾರೆ. ಈ ಕಾರಣದಿಂದ ವರ್ಷಾಂತರಗಳಿಂದ ಸಿನಿಮಾ ರಂಗದಿಂದ ದೂರವುಳಿದಿದ್ದ ಅವರೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಅವರು ಡಾಕ್ಟರ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಅನು ಪ್ರಭಾಕರ್ ವೈದ್ಯೆಯಾಗಿ ನಟಿಸುತ್ತಿರೋದು ನೆನಪಿರಲಿ ಪ್ರೇಂ ನಾಯಕನಾಗಿ ನಟಿಸುತ್ತಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ. ಅನು ಮಗುವಿಗೆ ತಾಯಿಯಾದ ನಂತರದಲ್ಲಿ ಒಪ್ಪಿಕೊಂಡಿರೋ ಮೊದಲ ಚಿತ್ರವಿದು. ಈ ಹಿಂದೆ ಅನುಕ್ತ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಆದರೆ ಅದು ತಾಯಿಯಾಗೋ ಮೊದಲೇ ಚಿತ್ರೀಕರಣ ನಡೆಸಿಕೊಂಡಿದ್ದ ಚಿತ್ರ. ಆದರೀಗ ಅನು ಪ್ರೇಮಂ ಪೂಜ್ಯಂ ಚಿತ್ರದ ವಿಶಿಷ್ಟವಾದ ಪಾತ್ರದ ಮೂಲಕ ಕಂ ಬ್ಯಾಕ್ ಆಗೋ ತಯಾರಿಯಲ್ಲಿದ್ದಾರೆ.
ಹಾಗಂತ ಅನು ಪ್ರಭಾಕರ್ ಪ್ರೇಮಂ ಪೂಜ್ಯಂ ಚಿತ್ರದ ತುಂಬಾ ಇರುತ್ತಾರೆ ಅಂದುಕೊಳ್ಳುವಂತಿಲ್ಲ. ಅವರು ಒಪ್ಪಿಕೊಂಡಿರೋದು ಚಿಕ್ಕ ಪಾತ್ರವನ್ನು. ಅದು ಚಿತ್ರದ ಕಡೆಯ ಭಾಗದಲ್ಲಿ ಕೆಲವೇ ಕೆಲ ನಿಮಿಷಗಳ ಕಾಲ ಬಂದು ಹೋಗುತ್ತದೆಯಂತೆ. ಆದರೆ ಆ ಪಾತ್ರ ಇಡೀ ಚಿತ್ರಕ್ಕೆ ಬೇರೆಯದ್ದೇ ತಿರುವು ಕೊಡುತ್ತದೆ. ಈ ಮೂಲಕವೇ ಎಲ್ಲ ಪ್ರೇಕ್ಷಕರ ನೆನಪಿನಲ್ಲುಳಿಯುವಂಥಾ ಈ ಪುಟ್ಟ ಪಾತ್ರವನ್ನು ಅನು ಪ್ರಭಾಕರ್ ಖುಷಿಯಿಂದಲೇ ಒಪ್ಪಿಕೊಂಡಿದ್ದಾರಂತೆ.
ಇದೀಗ ಪ್ರೇಮಂ ಪೂಜ್ಯಂ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಡೆಹ್ರಾಡೂನ್‍ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ನೆನಪಿರಲಿ ಪ್ರೇಮ್ ಅವರ ವೃತ್ತಿ ಬದುಕಿನ ದಿಕ್ಕು ದೆಸೆಗಳನ್ನು ಈ ಚಿತ್ರ ಬದಲಾಯಿಸಲಿದೆ ಎಂಬ ಒಳ್ಳೆ ಮಾತುಗಳೇ ಎಲ್ಲೆಡೆ ಕೇಳಿ ಬರುತ್ತಿವೆ. ಡಾ. ರಾಘವೇಂದ್ರ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಐಂದ್ರಿತಾ ರೇ ಮತ್ತು ಬೃಂದಾ ಪ್ರೇಂ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ.