ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಶಿಸ್ತಿನ ವಿಚಾರ ಪ್ರಸ್ತಾಪಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಬಿಜೆಪಿ ಶಾಸಕರಲ್ಲಿ ಶಿಸ್ತು ಇದೆ. ನಮ್ಮ ಶಾಸಕರು ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಾರೆ ಎಂದು ಹೇಳಿದರಂತೆ. ಆಗ ಸಚಿವರ ವಿರುದ್ಧ ತಿರುಗಿ ಬಿದ್ದ ಎಸ್.ಟಿ.ಸೋಮಶೇಖರ್ ಅವರು, ನಮ್ಮ ಕಷ್ಟ ನಮಗೆ ಗೊತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಶಾಸಕರನ್ನು ಮೊದಲು ಕೇಳಿ, ಆಮೇಲೆ ಮಾತಾಡಿ ಎಂದು ಕಿಡಿಕಾರಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ನೀವು ಸಚಿವರಾಗಿ ಅರಾಮಾಗಿ ಓಡಾಡಿಕೊಂಡು ಇದ್ದೀರಿ. ನಿಮಗೆ ನಮ್ಮ ಕಷ್ಟ ಎಲ್ಲಿ ಅರ್ಥ ಆಗುತ್ತದೆ. ಸುಮ್ಮನೆ ಮಾತಾಡಬೇಡರೀ ಜಾರ್ಜ್. ನಾನು ಹೇಳಿದ್ದು ಅರ್ಥವಾಯಿತಾ ಎಂದು ಸೋಮಶೇಖರ್ ಅಸಮಾಧಾನ ಹೊರ ಹಾಕಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಬ್ಬರನ್ನೂ ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.
ಇನ್ನುಮುಂದೆ ಸಿಎಂ ಕುಮಾರಸ್ವಾಮಿ ಅವರು ಎಲ್ಲಾ ಶಾಸಕರಿಗೂ ಸಿಗುತ್ತಾರೆ. ಜಿಲ್ಲಾವಾರು ಶಾಸಕರ ಸಭೆ ಮಾಡಿ ಸಮಸ್ಯೆ ಆಲಿಸುತ್ತಾರೆ. ಯಾವುದಾದರು ಶಾಸಕರಿಗೆ ಸಿಎಂ ಸಿಗದಿದ್ದರೆ ನನ್ನ ಗಮನಕ್ಕೆ ತನ್ನಿ, ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.