ಬೆಂಗಳೂರು: ಸಂಘ ಪರಿವಾರದ ಪ್ರಮುಖ ನಾಯಕರ ಜೊತೆಗೆ ಬಿಜೆಪಿಯ ಮುಖಂಡರು ಇಂದು ಮಹತ್ವದ ಸಭೆ ನಡೆಸಿದ್ದಾರೆ. ಈ ಮೂಲಕ ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಪಕ್ಷದ ಚಟುವಟಿಕೆಗಳು ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಚರ್ಚೆ ಮಾಡಿದ್ದಾರೆ.
ಚಾಮರಾಜಪೇಟೆಯ ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾದಲ್ಲಿ ನಡೆದ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಅರವಿಂದ್ ಲಿಂಬಾವಳಿ, ಸಿ.ಟಿ.ರವಿ, ರವಿಕುಮಾರ್, ಆರ್.ಅಶೋಕ್, ಬಿ.ಎಲ್.ಸಂತೊಷ್, ಅರುಣ್ ಕುಮಾರ್, ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಹಲವರು ಬೈಠಕ್‍ನಲ್ಲಿ ಭಾಗವಹಿಸಿದ್ದರು.
Advertisement
Advertisement
ಜಿಂದಾಲ್ ಭೂಮಾರಾಟ ಖಂಡಿಸಿ ಪಾದಯಾತ್ರೆ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು. ಆದರೂ ಕೊನೆಗೆ ಸದ್ಯಕ್ಕೆ ಪಾದಯಾತ್ರೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ಕೇಳಿ ಬಂದಿದೆ.
Advertisement
ಆರ್‌ಎಸ್‌ಎಸ್ ಸೂಚನೆಗಳೇನು?:
ಜಿಂದಾಲ್ ಭೂಮಾರಾಟದ ವಿರುದ್ಧ ಹೋರಾಟ ತೀವ್ರಗೊಳಿಸುವುದು, ಈ ವಿಚಾರವಾಗಿ ಜಿಲ್ಲಾ ಮಟ್ಟದಲ್ಲೂ ಮತ್ತು ಮುಂಬರುವ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಬೇಕು. ಬರ, ಸಾಲಮನ್ನಾ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧವೂ ಹೋರಾಟ ಚುರುಕುಗೊಳಿಸಬೇಕಿದೆ. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಮೂಲಕ 50 ಲಕ್ಷ ಹೊಸ ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಆರ್‌ಎಸ್‌ಎಸ್ ಗುರಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಘ ಪರಿವಾರದ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಬಹುದು. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಆರ್‌ಎಸ್‌ಎಸ್ ನಾಯಕರು ಬೈಠೆಕ್‍ನಲ್ಲಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪಶ್ಚಿಮ ಬಂಗಾಳದಲ್ಲಿ ಕೈಗೊಂಡ ಚುನಾವಣಾ ಪೂರ್ವ ಆಂದೋಲನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೆಲವು ಆಂದೋಲನಗಳು ನ್ಯಾಯವನ್ನೂ ಒದಗಿಸುತ್ತವೆ ಮತ್ತು ಪಕ್ಷಕ್ಕೆ ಲಾಭ ಆಗುತ್ತದೆ. ಈ ಬಾರಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಹಿಂದುಳಿದ ವರ್ಗಗಳ ಮತ ಸೆಳೆಯುವಲ್ಲಿ ಕೂಡ ಯಶಸ್ವಿಯಾಗಿದ್ದೇವೆ. ರಾಜ್ಯದಲ್ಲಿ ಕೂಡ ನಾವು ಎಲ್ಲಾ ಮೀಸಲು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಚುನಾವಣಾ ಪೂರ್ವದಲ್ಲಿ ನಾವು ಅಂದುಕೊಂಡಿದ್ದನ್ನು ಸಾಧಿಸಿರುವ ತೃಪ್ತಿ ಇದೆ ಅಂತ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿವೆ.