– ದರೋಡೆ ಬಳಿಕ ಎಚ್ಚೆತ್ತ ಸಿಎಂಎಸ್ ಕಂಪನಿ
– ಬಿಗಿಭದ್ರತೆ ಜೊತೆ ಎಟಿಎಂಗಳಿಗೆ ಹಣ ಸಾಗಾಟ
ಬೆಂಗಳೂರು: ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ಏಳು ಕೋಟಿ 11 ಲಕ್ಷ ದರೋಡೆ (Bengaluru Robbery) ಮಾಡಿದ್ದ ಗ್ಯಾಂಗ್ ದೋಚಿದ್ದು ಏಳು ಕೋಟಿಯಲ್ಲಿ ಆರೋಪಿಗಳು ಬಳಸಿದ್ದು 1 ಲಕ್ಷ ರೂಪಾಯಿ ಅನ್ನೋದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಖದೀಮರ ಕಳ್ಳಾಟದ ಮಾಹಿತಿ ಬಹಿರಂಗವಾಗಿದೆ.
ಆರೋಪಿಗಳು ಉಪಯೋಗಿಸಿಕೊಂಡಿದ್ದು ಒಂದೇ ಒಂದು ಲಕ್ಷ. ಎರಡು ಚೀಲದಲ್ಲಿದ್ದ 7 ಕೋಟಿ ಹಣದಲ್ಲಿ ಒಂದು ಲಕ್ಷ ತಗೆದು 40 ಸಾವಿರಕ್ಕೆ 1 ಒನ್ ಪ್ಲಸ್ ಮೊಬೈಲ್, 20,000 ರೂ.ಗೆ ಒಂದು ಮೊಬೈಲ್ ಖರೀದಿಸಿದ್ದಾರೆ. ದರೋಡೆ ಮಾಡಿಕೊಂಡು ಹೋಗಲು ಹೋಗಿದ್ದ ಪ್ಲ್ಯಾನ್ ಮಾಡಿದ್ದ ಕಡೆಗಳಲ್ಲೆಲ್ಲ ಸುತ್ತಾಡಲು ಪೆಟ್ರೋಲ್ ಹಾಗೂ ಎರಡು ದಿನ ಊಟಕ್ಕೆ ಹಾಗೂ ವಾಸವಾಗುವುದಕ್ಕೆ ಮಾಡಿದ್ದ ಲಾಡ್ಜ್ ಗಳಿಗೆ ಹಣ ಕೊಟ್ಟಿದ್ದಾರೆ. ಸಣ್ಣ ಪುಟ್ಟ ಸಹಾಯ ಮಾಡಿದ್ದವರಿಗೆ 5, 10 ಸಾವಿರಕೊಟ್ಟಿದ್ದಾರೆ.
ಪೊಲೀಸರು ಆರೋಪಿಗಳು ದರೋಡೆ ಮಾಡಿದ್ದ ಹಣ ರಿಕವರಿ ಮಾಡಲು ಹೆಚ್‌ಡಿಎಫ್‌ಸಿ ಬ್ಯಾಂಕ್ ನಿಂದ ದರೋಡೆಯಾಗಿದ್ದ 7 ಕೋಟಿ 11 ಲಕ್ಷದ ಸೀರಿಯಲ್ ನಂಬರ್ ಕೂಡ ಪತ್ರ ಬರೆದು ಬ್ಯಾಂಕ್ ನವರಿಂದ ಪಡೆದುಕೊಂಡಿದ್ದಾರೆ. ಮಿಸ್ ಆಗಿರೋ ಸೀರಿಯಲ್ ನಂಬರ್‌ನ ನೋಟ್‌ಗಳನ್ನ ಮರಳಿ ರಿಕವರಿ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಎಟಿಎಂ ಹಣ ಸಾಗಿಸಲು ಮತ್ತಷ್ಟು ಬಿಗಿ ಭದ್ರತೆ:
ಬೆಂಗಳೂರಿನಲ್ಲಿ ಕಳೆದ ಬುಧವಾರ ಹಾಡಹಗಲೇ 7 ಕೋಟಿ 11 ಲಕ್ಷ ದರೋಡೆ ಮಾಡಿದ ಬಳಿಕ, ಸಿಎಂಎಸ್ ಕಂಪನಿ ಫುಲ್ ಅಲರ್ಟ್ ಆಗಿದೆ. ರಾಜಾಜಿನಗರದ ಸಿಎಂಎಸ್ ಕಂಪನಿ ಬಳಿ ಹದ್ದಿನ ಕಣ್ಣಿಟ್ಟಿದ್ದು, ಎಟಿಎಂ ಘಟಕಗಳಿಗೆ ಹಣ ಸಾಗಿಸುವ ಕಂಪನಿಯ ವಾಹನಕ್ಕೆ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ.
ಕಂಪನಿಯಿಂದ ಲೋಡ್ ಮಾಡಿಕೊಂಡ ವಾಹನಕ್ಕೆ ಟೈಟ್ ಸೆಕ್ಯುರಿಟಿ ಮಾಡಲಾಗ್ತಿದೆ. ಇಬ್ಬರು ಕಸ್ಟೋಡಿಯನ್, ಗನ್ ಮ್ಯಾನ್, ಚಾಲಕನೊಂದಿಗೆ ಭಾರಿ ಭದ್ರತೆಯೊಂದಿಗೆ ಹಣ ತುಂಬಿದ ವಾಹನ ಸಾಗ್ತಿದೆ. ಈ ವೇಳೆ ಹಿಂದೆ-ಮುಂದೆ ಕ್ಯಾಮೆರಾ ತಪಾಸಣೆಯನ್ನೂ ಮಾಡಲಾಗ್ತಿದೆ.
ಬೆಂಗಳೂರಿನಲ್ಲಿ ಸಿಎಂಎಸ್ ಕಂಪನಿಯು ಮೂರು ಕಡೆ ಸಬ್ ಬ್ರ‍್ಯಾಂಚ್‌ಗಳನ್ನ ಹೊಂದಿದೆ. ಎಲ್ಲೆಡೆಯೂ ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದೆ. ಅದಾಗ್ಯೂ ಕೆಲ ಕಡೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಇದೆ. ಕೆಲವು ಕಡೆ ಗನ್ ಮ್ಯಾನ್ ಇರೋದಿಲ್ಲ. ಇನ್ನೂ ಕೆಲವು ಕಡೆ ಕಸ್ಟೋಡಿಯನ್ ಇರೋದಿಲ್ಲ. ಹೀಗಿದ್ದೂ ಹಣ ಸಾಗಿಸಲಾಗ್ತಿದೆ ಅಂತ ಕಂಪನಿಯ ಸಿಬ್ಬಂಧಿಗಳೇ ಆರೋಪಿಸ್ತಿದ್ದಾರೆ. 7 ಕೋಟಿ ದರೊಡೆಯ ಬಳಿಕ, ಹಣ ಸಾಗಾಟ ಮಾಡುವ ವಾಹನದ ಸಿಬ್ಬಂಧಿಗಳು ಇದೀಗಾ ಮೈಯೆಲ್ಲ ಕಣ್ಣಾಗಿಟ್ಟುಕೊಂಡು ಕೆಲಸ ಮಾಡ್ತಿದ್ದಾರೆ.

