ಮನೆ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನಂದಾರು- ರೆಸಾರ್ಟ್ ವಾಸ್ತವ್ಯಕ್ಕೆ ‘ಕೈ’ ಶಾಸಕರ ವಿರೋಧ

Public TV
2 Min Read
Congress MLAs

ಬೆಂಗಳೂರು: ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನು ಅಂದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ರೆಸಾರ್ಟ್ ವಾಸ್ತವ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ಸಮೀಪದ ಗೊರಗುಂಟೇಪಾಳ್ಯದಲ್ಲಿರುವ ತಾಜ್ ವಿವಾಂತ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರು ಕಳೆದ ಕೆಲವು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ರೆಸಾರ್ಟ್ ಮುಂದೆ ಪೊಲೀಸರ ಭದ್ರತೆ ಒದಗಿಸಲಾಗಿದೆ. ಆದರೆ ಈಗ ರೆಸಾರ್ಟ್ ವಾಸ್ತವ್ಯಕ್ಕೆ ಕೆಲ ಶಾಸಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Congress MLAs B

ಬಿಟ್ಟು ಹೋಗುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೋಮವಾರ ವಿಶ್ವಾಸ ಮತಯಾಚನೆ ಮಾಡಬೇಕು. ಆಗಲೂ ಸರ್ಕಾರ ಉಳಿಯುವುದು ಡೌಟ್. ಅನಾವಶ್ಯಕವಾಗಿ ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದೀರಿ. ಹೋಗುವವರು ಯಾವಾಗಿದ್ದರೂ ಹೋಗುತ್ತಾರೆ. ಅವರನ್ನು ತಡೆಯಲು ಸಾಧ್ಯವಿದೆಯೇ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ 10 ದಿನಗಳಿಂದ ನಾವು ರೆಸಾರ್ಟಿನಲ್ಲಿಯೇ ಇದ್ದೇವೆ. ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನು ಅಂದುಕೊಳ್ಳುತ್ತಾರೆ. ಊರಿಗೆ ತೆರಳಲು ಅವಕಾಶ ಮಾಡಿಕೊಡಿ. ನಾವು ಪಕ್ಷ ಬಿಟ್ಟು ಓಡಿ ಹೋಗುವವರಲ್ಲ ಎಂದು ಕೆಲ ಶಾಸಕರು ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ.

Congress MLAs C

ಅವಶ್ಯಕತೆ ಇರುವವರು ಹೋಗಿ ಬನ್ನಿ ಎಂದು ನಾಯಕರು ತಿಳಿಸಿದ್ದಾರೆ. ಹೀಗಾಗಿ ಕೆಲವು ಶಾಸಕರು ತಮ್ಮ ಊರಿಗೆ ತೆರಳಿದ್ದು, ರೆಸಾರ್ಟಿನಲ್ಲಿ ಇದೀಗ 24 ಶಾಸಕರು ಉಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಿ ಮತ್ತೆ ಸೋಮವಾರ ಬೆಳಗ್ಗೆ ಸದನಕ್ಕೆ ಹಾಜರಾಗುವುದು ಕಷ್ಟ. ಹೀಗಾಗಿ ಅವರು ರೆಸಾರ್ಟಿನಲ್ಲಿಯೇ ಉಳಿದುಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಶಾಸಕರು ತಮ್ಮ ತಮ್ಮ ಊರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಸೋಮವಾರ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ತಾಜ್ ವಿವಾಂತದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯ ನೇತೃತ್ವವನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಹಿಸಿಕೊಳ್ಳಲಿದ್ದು, ವಿಶ್ವಾಸ ಮತ ಯಾಚನೆ ವೇಳೆ ನಡೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬರುವ ಸಾಧ್ಯತೆ ಎಂಬುದಾಗಿ ತಿಳಿದುಬಂದಿದೆ.

Congress MLAs A 1

ಪಬ್ಲಿಕ್ ಟಿವಿಗೆ ಜೊತೆ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಮಾತನಾಡಿ, ನಾವು ಜನರ ಏಳಿಗೆಗಾಗಿ ಬಂದವರು. ಬಸವ ಶರಣರ ತತ್ವದ ಮೇಲೆ ನಮ್ಮ ಜೀವನ ನಡೆಯುತ್ತಿದೆ. ಆಪರೇಷನ್ ಕಮಲದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ವಿಚಾರದಲ್ಲಿ ನಮ್ಮ ಹಿರಿಯರು ಮಾತನಾಡುತ್ತಾರೆ. ನಾನಂತು ಆಪರೇಷನ್‍ಗೆ ಒಳಗಾಗಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *