ಬೆಂಗಳೂರು: ಉಪ ಚುನಾವಣೆ ಹೊತ್ತಲ್ಲೇ ಆಪರೇಷನ್ ಯಶಸ್ವಿಯಾಗಿದ್ದು ರಾಜು ಕಾಗೆ(ಭರಮ ಗೌಡ ಕಾಗೆ) ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿಯಲ್ಲಿನ ಬೆಳವಣಿಗೆ ನನಗೆ ನೋವು ತಂದಿದ್ದು, ಶ್ರೀಮಂತ ಪಾಟೀಲ್‍ಗೆ ಟಿಕೆಟ್ ನೀಡುತ್ತಿರುವುದು ಬೇಸರ ತಂದಿದೆ. ಹೀಗಾಗಿ ನ.18ಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದ್ದಾರೆ.
Advertisement
ಇಂದು ಬಿಜೆಪಿ ತೊರೆಯುವ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಇದೇ ತಿಂಗಳು 13 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಮತ್ತು ಇದೇ ತಿಂಗಳ 18 ರಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಬಿಜೆಪಿಯವರು ಬೇರೆ ಅಧಿಕಾರ ನೀಡುತ್ತೇವೆ ಎಂದು ಹೇಳಿದರು ಯಾಕೆ ಈ ತೀರ್ಮಾನ ತೆಗೆದುಕೊಂಡಿದ್ದೀರಾ ಎಂದು ಕೇಳಿದಾಗ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧಿಕಾರವನ್ನು ತೆಗೆದುಕೊಳ್ಳಲು ನಾನು ಚಿಕ್ಕ ಮಗು ಅಲ್ಲ. ಚಿಕ್ಕಮಕ್ಕಳು ಅತ್ತಾಗ ಚಾಕ್ಲೇಟ್ ಕೊಡುವ ರೀತಿಯಲ್ಲಿ ನನಗೆ ಅದನ್ನು ಅವರು ಕೊಡಲು ಬಂದಿದ್ದಾರೆ. ನಾನು 15 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ ಮೂರು ಬಾರಿ ಶಾಸಕ ಆಗಿದ್ದೇನೆ. ಶಾಸಕನಾದ ಸಮಯದಲ್ಲೂ ಬಿಜೆಪಿಯಲ್ಲಿ ನನಗೆ ಬಹಳ ನೋವು ನೀಡಿದ್ದರು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
Advertisement
ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿರಬಹುದು ಆದರೆ ಅದಕ್ಕೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದ ಅನರ್ಹ ಶಾಸಕರಾದ ಶ್ರೀಮಂತ ಪಾಟೀಲರನ್ನು ನಾನು ಹಿಂದಿನಿಂದಲೂ ವಿರೋಧ ಮಾಡುತ್ತಾ ಬಂದಿದ್ದೇನೆ. ಆದರೆ ಇವರು ನನಗೆ ಹೇಳದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅನರ್ಹ ಮಾಡಿಸಿ ಈಗ ನನ್ನ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡುತ್ತಿರುವುದು ನನಗೆ ಬಹಳ ಬೇಸರವಾಗಿದೆ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದೇನೆ ಅವರು ಬನ್ನಿ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಯಾವ ಕಾಂಗ್ರೆಸ್ ನಾಯಕರ ಜೊತೆ ವಿರೋಧ ಕಟ್ಟಿಕೊಂಡಿಲ್ಲ. ಈಗ ನಾನು ಒಬ್ಬನೇ ಕಾಂಗ್ರೆಸ್ ಸೇರುತ್ತೇನೆ ನಂತರ ಊರಿಗೆ ಹೋಗಿ ಬೇರೆಯದನ್ನು ತೀರ್ಮಾನ ಮಾಡುತ್ತೇನೆ. ಬಿಎಸ್‍ವೈ ಅವರು ಕಳೆದ ಒಂದೂವರೆ ತಿಂಗಳಿಂದ ನನ್ನ ಸಂಪರ್ಕ ಮಾಡಿಲ್ಲ. ಬಿಜೆಪಿ ನಾಯಕರು ನನಗೆ ತುಂಬ ಅವಮಾನ ಮಾಡಿದ್ದಾರೆ ಎಂದು ಕಮಲ ನಾಯಕರ ಮೇಲೆ ಕಿಡಿಕಾರಿದರು.