– ಮನೆಗಳಿಗೆ ನುಗ್ಗಿದ ಮಳೆ ನೀರು, ಮರ ಧರೆಗೆ, ಕಾಂಪೌಂಡ್ ಗೋಡೆ ಕುಸಿತ
ಬೆಂಗಳೂರು: ಬಿಸಿಲ ಬೇಗೆಗೆ ಬಸವಳಿದಿದ್ದ ಬೆಂಗಳೂರಿಗೆ ಮಳೆ ಸುರಿದು ತಂಪೆರದಿದೆ. ನಗರದ ಹಲವೆಡೆ ಪೂರ್ವ ಮುಂಗಾರು ಅಬ್ಬರಿಸಿದೆ.
ಯಲಹಂಕದಲ್ಲಿ ಅರ್ಧಗಂಟೆ ಸುರಿದ ಮಳೆಗೆ ಅಸ್ತವ್ಯಸ್ತ ಉಂಟಾಗಿದೆ. 10 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿದ್ದ ನೀರನ್ನು ಮನೆಯವರು ಹೊರಹಾಕಿದರು.
ಬೇಸಿಗೆ ಮಳೆಗೆ ಯಲಹಂಕದ ಬ್ಯಾಟರಾಯನಪುರ ಬಳಿ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಇಡೀ ರಸ್ತೆ ಜಲಾವೃತ ಆಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ಬಳಿ ಮರವೊಂದು ಧರೆಗುರುಳಿದೆ.
ಬೆಟ್ಟಹಳ್ಳಿ ಲೇಔಟ್‌ನ ರಸ್ತೆಗಳಲ್ಲಿ ಮಳೆ ನೀರು ನಿಂತಿದೆ. ಬೆಳಗ್ಗೆಯಿಂದ ಬಂದ್ ಗೊಂದಲದಲ್ಲಿದ್ದ ಜನರನ್ನ ಮಳೆರಾಯ ರಿಲ್ಯಾಕ್ಸ್ ಮೂಡ್‌ಗೆ ತಂದಿದ್ದಾನೆ. ದಾಸರಹಳ್ಳಿ, ಮಾದನಾಯಕನಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ವರ್ಷದ ಮೊದಲ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಯಶವಂತಪುರದಲ್ಲಿ ಸಂಜೆ ಮಳೆ ಪ್ರಾರಂಭವಾಯಿತು. ತುಂತುರು ಮಳೆ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟು ಮಾಡಿದೆ.