ಬೆಂಗಳೂರು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ (Bengaluru Rains) ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರ ಮಹಿಳೆ ಭಾರೀ ಮಳೆಯಲ್ಲಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಇನ್ಫೋಸಿಸ್ ಉದ್ಯೋಗಿಯಾಗಿದ್ದ ಭಾನುರೇಖಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇವರು ಆಂಧ್ರದ ಕೃಷ್ಣ ಜಿಲ್ಲೆಯ ತೇಲಾಪೋರಲು ಗ್ರಾಮದವರು. ಆಂಧ್ರದಿಂದ ಬೆಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ
ಏನಿದು ಘಟನೆ?
ಆಂಧ್ರದಿಂದ ಬಂದು ನಗರದ ಪ್ಯಾಲೆಸ್, ಲಾಲ್‌ಬಾಗ್, ಕಬ್ಬನ್ ಪಾರ್ಕ್, ವಿಧಾನಸೌದ ಸೇರಿದಂತೆ ಹಲವು ಕಡೆ ಪ್ರವಾಸ ಮುಗಿಸಿ ಬಂದಿದ್ದರು. ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಭಾರೀ ಮಳೆಯಿಂದಾಗಿ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ನೀರು ತುಂಬಿತ್ತು. ತಿಳಿಯದೆಯೇ ಇವರು ಅಂಡರ್‌ಪಾಸ್ ಮುಖಾಂತರ ಹಾದುಹೋಗಲು ಕಾರು ಚಾಲನೆ ಮಾಡಿದ್ದಾರೆ. ನೀರು ತುಂಬಿದ್ದರಿಂದ ಕಾರು ಅಲ್ಲೇ ಸಿಲುಕಿಕೊಂಡಿದೆ. ನಂತರ ಇವರು ಹೊರಬರಲು ಕಾರಿನ ಗ್ಲಾಜ್ ಇಳಿಸಿದ್ದಾರೆ. ಹೀಗೆ ಮಾಡುತ್ತಿದ್ದಂತೆ ನೀರು ಕಾರಿನೊಳಗಡೆ ನುಗ್ಗಿದೆ.
ಈ ವೇಳೆ ಭಾನುರೇಖಾ ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ನಪ್ಪಿದ್ದಾರೆ.