ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನ ಜಾವ ಸುರಿದ ಭಾರೀ ಮಳೆಗೆ (Rain) ಹಲವು ಭಾಗಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ (Electronic City) ನೀರು ನಿಂತ ಹಿನ್ನೆಲೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ.
ಧಾರಾಕಾರ ಮಳೆಗೆ ಬೆಂಗಳೂರು ತತ್ತರವಾಗಿದ್ದು, ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬೊಮ್ಮನ ಹಳ್ಳಿ, ನಾಯಂಡಹಳ್ಳಿ, ಕುಮಾರಸ್ವಾಮಿ ಲೇಔಟ್, ಆರ್ ಆರ್ ನಗರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ನಗರದ ಶಿವಾನಂದ ಸರ್ಕಲ್ (Shivananda Circle) ಅಂಡರ್ ಪಾಸ್ ಮುಳುಗಡೆಯಾಗಿದೆ. ನೀರಿನಲ್ಲಿ ಬಿಎಂಡಬ್ಲ್ಯೂ ಕಾರು ಕೆಟ್ಟು ನಿಂತು ವಿದೇಶಿ ಮಹಿಳೆಯೊಬ್ಬರು ಪರದಾಟ ನಡೆಸಿದ್ದಾರೆ. ಖಾಸಗಿ ಹೋಟೆಲಿಗೆ ತೆರಳುತ್ತಿದ್ದ ವಿದೇಶಿ ಮಹಿಳೆಯನ್ನು ಪಬ್ಲಿಕ್ ಟಿವಿ ರಕ್ಷಿಸಿದೆ.
ಚಾಮರಾಜಪೇಟೆಯ ಶಿರಸಿ ವೃತ್ತದ ಬಳಿ ದೊಡ್ಡ ಮರ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ವಾಹನ ಸಿಲುಕಿಲ್ಲ, ಪ್ರಾಣಾಪಾಯವಾಗಿಲ್ಲ.
ಮತ್ತೆ ಸಾಯಿ ಲೇಔಟ್ ಜನರು ಸಂಕಷ್ಟ ಅನುಭವಿಸಿದ್ದು ರಾತ್ರಿಯಿಡೀ ಸುರಿದ ಮಳೆಗೆ ಲೇಔಟ್ ಪೂರ್ತಿ ಜಲಾವೃತವಾಗಿದೆ. ಮೊಣಕಾಲವರೆಗೂ ನೀರು ತುಂಬಿದ್ದು ಜನ ಆಕ್ರೋಶ ಹೊರಹಾಕಿದ್ದಾರೆ. ಮನೆಯ ಒಳಗಡೆಯೂ ನೀರು ತುಂಬಿದ್ದು ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ. ಭಾನುವಾರ ಈ ಜಾಗಕ್ಕೆ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ಭೇಟಿ ನೀಡಿದ್ದರು.