ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳುಹಿಸಲೆಂದು ಕಾಂಗ್ರೆಸ್ ನೀಡಿದ ಚೆಕ್ ನಕಲಿ ಎಂದು ಕಂದಾಯ ಮಂತ್ರಿ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.
Advertisement
Advertisement
ಇದೇ ವೇಳೆ ಕಾಂಗ್ರೆಸ್ ನಾಯಕರು ಕೆಂಪೇಗೌಡ ಬಸ್ ನಿಲ್ದಾಣ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಸುಮಾರು 5 ಸಾವಿರ ಮಂದಿ ಮಧ್ಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರಿಗಾದರೂ ಸೋಂಕು ಇದ್ದರೆ ಅನ್ನೋ ಪರಿಜ್ಞಾನವೂ ಅವರಿಗೆ ಇರಲಿಲ್ಲ. ಹೀಗಿರುವಾಗ ಬೇರೆಯವರಿಗೆ ಹೇಳುವ ನೈತಿಕತೆ ಅವರಿಗಿಲ್ಲ. ಹೀಗಾಗಿ ಅವರಿಗೂ ತಪಾಸಣೆಯಾಗಬೇಕು. ಜೊತೆಗೆ ಅವರಿಗೂ ಕ್ವಾರೆಂಟೈನ್ ಮಾಡೋ ಚಾನ್ಸ್ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Advertisement
Advertisement
ದಿನೇಶ್ ಗುಂಡುರಾವ್ ಅಧ್ಯಕ್ಷರಾಗಿದ್ದಾಗ ದೇಣಿಗೆ ನೀಡಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅಧ್ಯಕ್ಷ ಆಗುತ್ತಿದ್ದಂತೆ ಏಕಾಏಕಿ ದುಡ್ಡು ಬಂದಿದೆ. ಅದು ನಮಗೆ ಆಶ್ಚರ್ಯ ತಂದಿದೆ. ಹೀಗಾಗಿ ಅವರು ನೀಡಿದ ಚೆಕ್‍ನ್ನು ನಾವು ಹುಷಾರಾಗಿ ನೋಡುತ್ತಿದ್ದೇವೆ. ಅವರ ಒಂದು ಕೋಟಿ ಚೆಕ್ ಅನ್ನು ನಾವು ತಗೆದುಕೊಂಡಿಲ್ಲ. ನಾವು ನೂರಾರು ಕೋಟಿ ಈಗಾಗಲೇ ಖರ್ಚು ಮಾಡಿದ್ದೇವೆ. ಕಾಂಗ್ರೆಸ್ ದೇಶದಿಂದ ಪಡೆದಿದ್ದೆ ಹೆಚ್ಚು. ಅರವತ್ತು ವರ್ಷದಲ್ಲಿ ನೀವು ಎಷ್ಟು ಪಡೆದಿದ್ದೀರಿ. ಈಗ ತೀರ್ಥ ಕೊಟ್ಟಂತೆ ಕೊಡಬೇಡಿ. ನಿಮ್ಮ ಪಕ್ಷಕ್ಕೆ 120 ವರ್ಷ ಇತಿಹಾಸ ಇದೆ. ಕೊಡುವುದಿದ್ದರೆ 120 ಕೋಟಿ ಕೊಡಿ ಅದನ್ನು ಬಿಟ್ಟು ಪ್ರಚಾರಕ್ಕೆ ಹಣ ಕೊಡಬೇಡಿ ಎಂದು ಅಶೋಕ್ ವಾಗ್ದಾಳಿ ನಡೆಸಿದರು.