ಬೆಂಗಳೂರು: ನಗರದ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ತರುಣ್ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಸ್‍ಎಸ್‍ಎಲ್‍ಸಿ ಫೇಲ್ ಆಗಿರುವ ತರುಣ್ ಜೆಪಿ ನಗರದ ಖಾಸಗಿ ಶಾಲೆಯಲ್ಲಿ ರಿಸೆಪ್ಸನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ. ಈ ವೇಳೆ ಅಲ್ಲಿದ್ದ ಪ್ರಿನ್ಸಿಪಾಲ್ ಜೊತೆ ಲವ್ವಿಡವ್ವಿ ಶುರವಾಗಿದೆ.
ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳಿಂದ ಲಿವಿಂಗ್ ರಿಲೇಷನ್ ಶಿಪ್ ಇಟ್ಕೊಂಡಿದ್ದರು. ಆದರೆ ಒಂದೂವರೆ ತಿಂಗಳಿಂದ ತರುಣನನ್ನ ಪ್ರಿನ್ಸಿಪಾಲ್ ತಿರಸ್ಕರಿಸಿದ್ದಾರೆ. ಪ್ರಿನ್ಸಿಪಾಲ್ ತಿರಸ್ಕರಿಸಿದ್ದಕ್ಕೆ ಮಾನಸಿಕ ಖಿನ್ನತೆಗೊಳಗಾಗಿ ನಾಲ್ಕೈದು ಬಾರಿ ಕೈ ಕುಯ್ದುಕೊಂಡಿದ್ದ ತರುಣ್ ಗುರುವಾರ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎಂದು ಹೇಳುತ್ತಿರುವ ಯುವಕನ ಪೋಷಕರು ನಿಧನರಾಗಿದ್ದಾರೆ. ಈಗಾಗಲೇ ಪ್ರಿನ್ಸಿಪಾಲ್ ಗೆ ಮದುವೆಯಾಗಿ 20 ವರ್ಷದ ಮಗಳಿದ್ದು, ಪತಿ ಕೇರಳದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.