Connect with us

ರಾಜಾರೋಷವಾಗಿ ಓಡಾಡುತ್ತಿರುವ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ನಾಪತ್ತೆಯಾಗಿರುವ ಆರೋಪಿ!

ರಾಜಾರೋಷವಾಗಿ ಓಡಾಡುತ್ತಿರುವ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ನಾಪತ್ತೆಯಾಗಿರುವ ಆರೋಪಿ!

ಬೆಂಗಳೂರು: ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು. ಬಳಿಕ ಸಾಕಷ್ಟು ಹೋರಾಟ ಬಳಿಕ ದೂರು ದಾಖಲು. ವ್ಯಕ್ತಿ ರಾಜರೋಷವಾಗಿ ಓಡಾಡುತ್ತಿದ್ದರೂ ಅಂತಿಮವಾಗಿ ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ಆರೋಪಿ ನಾಪತ್ತೆ ಎಂದು ಉಲ್ಲೇಖ. ಇದು ಬೆಂಗಳೂರು ಜನತೆ ರಕ್ಷಣೆ ನೀಡುತ್ತಿರುವ ಪೊಲೀಸರ ಕಾರ್ಯವೈಖರಿ.

ದಿನಬೆಳಗಾದ್ರೇ ಮೌರ್ಯ ಸರ್ಕಲ್‍ನಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ರಾಜಕೀಯದ ಮೈನ್‍ಸ್ಟ್ರೀಮ್‍ಗೆ ಬಂದ ಮನೋಹರ್ ಸದ್ಯ ವಿದ್ಯುತ್ ಕಾರ್ಖಾನೆ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ವಿಚಿತ್ರ ಅಂದ್ರೆ ಇವರ ಮೇಲೆ ಎಫ್‍ಐಆರ್ ಆಗಿದ್ರೂ ನಿಗಮಮಂಡಳಿ ಅಧ್ಯಕ್ಷರಾಗಿದ್ದಾರೆ. ಅಷ್ಟೇ ಅಲ್ಲ ರಾಜಾರೋಷವಾಗಿ ಸಾರ್ವಜನಿಕ ಜೀವನದಲ್ಲಿ ಓಡಾಡುತ್ತಿದ್ದಾರೆ. ಆದರೆ ಈ ವ್ಯಕ್ತಿ ನಮ್ಮ ಬೆಂಗಳೂರು ಪೊಲೀಸರ ಪಾಲಿಗೆ ನಾಪತ್ತೆಯಾಗಿರುವ ಆರೋಪಿ.

ಏನಿದು ಪ್ರಕರಣ: 2014 ರಲ್ಲಿ ನಿಗಮ ಮಂಡಳಿ ಸ್ಥಾನ ಗಿಟ್ಟಿಸಲು ಓಡಾಡಿಕೊಂಡಿದ್ದ, ಆಗಿನ್ನೂ ಯೂತ್ ಕಾಂಗ್ರೆಸ್ ಮುಖಂಡರಾಗಿದ್ದ ಮನೋಹರ್ ಸಿದ್ದು ಸರ್ಕಾರಕ್ಕೆ ಕಪ್ಪ ಕೊಡಬೇಕು, 1 ಕೋಟಿ ರೂ. ಸಾಲ ಕೊಡಿ ಅಂತಾ ಸ್ನೇಹಿತ ಜ್ಞಾನೇಶ್ ಹಾಗೂ ಆತನ ತಾಯಿಯ ಬೆನ್ನುಬಿದ್ದಿದ್ರು. ಇದಕ್ಕೆ ಜ್ಞಾನೇಶ್ ತಮ್ಮಂದಿರಾದ ಪ್ರಮೋದ್ ಶಂಕರ್ ಹಾಗೂ ಪ್ರದೀಪ್, ಮನೋಹರ್‍ಗೆ ಕುಮ್ಮುಕ್ಕು ಕೊಡ್ತಾ ಇದ್ರು. ಸಾಲ ಕೊಡೋದಕ್ಕೆ ಆಗಲ್ಲ ಅಂತಾ ಹೇಳಿದಾಗ ಮನೋಹರ್ ಅಸಲಿ ಮುಖ ತೋರಿಸಿ ಜ್ಞಾನೇಶ್ ಮನೆಗೆ ನುಗ್ಗಿ ತಾಯಿಯ ಮೇಲೆ ಹಲ್ಲೆ ಮಾಡಿದ್ದರು.

ಮನೋಹರ್ ಕಾಟಕ್ಕೆ ಬೇಸತ್ತು ಜ್ಞಾನೇಶ್ ಹಾಗೂ ಅವರ ತಾಯಿ ಡೆತ್‍ನೋಟ್ ಬರೆದು ಆತ್ಮಹತ್ಯಗೆ ಶರಣಾಗೋದಕ್ಕೆ ಪ್ರಯತ್ನಿಸಿದ್ರು. ಜ್ಞಾನೇಶ್‍ನನ್ನು ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಬದುಕಿಸಿದ್ರೂ ಅವರ ತಾಯಿಯನ್ನು ಬದುಕಿಸೋದಕ್ಕೆ ಸಾಧ್ಯವಾಗಲಿಲ್ಲ. ಈಗ ತಾಯಿ ಸಾವಿನ ನ್ಯಾಯಕ್ಕಾಗಿ ಜ್ಞಾನೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದ್ರೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಸಾಕಷ್ಟು ಕಸರತ್ತು ಮಾಡಿದ್ದಾರೆ. ಕೊನೆಗೆ ಜನವರಿ 16ರಂದು ಜಾರ್ಜ್‍ಶೀಟ್ ಸಲ್ಲಿಕೆ ಮಾಡಿರುವ ಕೆಪಿ ಅಗ್ರಹಾರ ಪೊಲೀಸರು ಆರೋಪಿ ಮನೋಹರ್ ನಾಪತ್ತೆಯಾಗಿದ್ದಾರೆ ಅಂತಾ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿ ಎಡವಟ್ಟು ಮಾಡಿದ್ದಾರೆ.

ಆರೋಪಿ ಸ್ಥಾನದಲ್ಲಿರುವವರನ್ನು ನಿಗಮಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದೇ ತಪ್ಪು. ಹೀಗಿರುವಾಗ ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ನಾಪತ್ತೆ ಅಂತಾ ಉಲ್ಲೇಖ ಮಾಡಿದ್ದು ಆರೋಪಿಯ ರಕ್ಷಣೆಗೆ ನಿಂತಿದ್ದಾರೆ. ನನ್ನ ತಾಯಿಯ ಹತ್ಯೆಗೈದವರನ್ನು ಸಿದ್ದರಾಮಯ್ಯ ಸರ್ಕಾರ ರಕ್ಷಿಸುತ್ತಿದೆ ಅಂತಾ ಜ್ಞಾನೇಶ್ ಅಳಲು ತೋಡಿಕೊಂಡಿದ್ದಾರೆ.

Advertisement
Advertisement