ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಸಮರ ಸಾರಿದ್ದ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಈಗ ಏಕಮುಖ ಸಂಚಾರ ಮಾಡುತ್ತಿರುವ (One-way Violations) ವಾಹನ ಸವಾರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುತ್ತಿದ್ದಾರೆ
ಹೌದು. ಜ.21 ರಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. 9 ದಿನಕ್ಕೆ ಬರೋಬ್ಬರಿ 23 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದರೆ ನಿನ್ನೆ ಒಂದೇ ದಿನ 3 ಸಾವಿರ ಪ್ರಕರಣ ದಾಖಲಾಗಿದೆ. ಅದರಲ್ಲೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಡಿದು ವಾಹನ ಚಾಲನೆ – 11,500 ಚಾಲಕರ ಡಿಎಲ್ ರದ್ದು
ಯಾವ ವಲಯದಲ್ಲಿ ಎಷ್ಟು?
ವಿಭಾಗ – ನಿನ್ನೆ – ಒಟ್ಟು
ಉತ್ತರ – 329 – 4660
ದಕ್ಷಿಣ – 1327 – 7709
ಪೂರ್ವ – 913 – 6832
ಪಶ್ಚಿಮ – 499 – 4327
ಏಕಮುಖ ಸಂಚಾರದಿಂದ ವಾಹನ ದಟ್ಟಣೆ, ಸವಾರರಿಗೆ ಸಮಸ್ಯೆ ಆಗುತ್ತಿದೆ ಎಂದು ಪ್ರಯಾಣಿಕರು ಸಂಚಾರ ಪೊಲೀಸರಿಗೆ ದೂರು ನೀಡುತ್ತಿದ್ದರು. ಅಷ್ಟೇ ಅಲ್ಲದೇ ಕಾರಿನ ಡ್ಯಾಶ್‌ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ಅಪ್ಲೋಡ್ ಮಾಡಿ ದೂರು ಸಲ್ಲಿಸುತ್ತಿದ್ದರು.
ದಿನೇ ದಿನೇ ಒನ್‌ವೇ ಸವಾರರ ಕಿರಿಕಿರಿ ಜಾಸ್ತಿಯಾಗುತ್ತಿದ್ದಂತೆ ಪೊಲೀಸರು ಈಗ ಕಾರ್ಯಾಚರಣೆಗೆ ಇಳಿದಿದ್ದಾರೆ. ಒನ್ ವೇ ಸಂಚಾರದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದವರೆಯುತ್ತದೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

