ಬೆಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯಬಹುದು ಎಂದು ನಗರದಲ್ಲಿ ಹೇರಲಾಗಿದ್ದ 144 ಸೆಕ್ಷನ್ ಇಂದು ರಾತ್ರಿ 12 ಗಂಟೆಗೆ ಮುಕ್ತಾಯವಾಗಲಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಇದ್ದ ನಿಷೇಧಾಜ್ಞೆ ಇಂದಿಗೆ ಕೊನೆಯಾಗಲಿದ್ದು, ನಾಳೆಯಿಂದ ಮುಂದುವರಿಸುವುದಿಲ್ಲ. ಡಿಸೆಂಬರ್ 19ರ ಬೆಳಗಿನ ಜಾವದಿಂದ ನಿಷೇಧಾಜ್ಞೆ ಹೇರಲಾಗಿತ್ತು. ಈ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ನಗರದಲ್ಲಿ ಕೆಲವೊಂದಷ್ಟು ಪ್ರತಿಭಟನೆಗಳನ್ನು ಹೊರತು ಪಡಿಸಿದರೆ ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿ, ಕಾನೂನು ಸುವ್ಯವಸ್ಥೆಗೆ ಭಂಗವಾಗಿಲ್ಲ. ಇದೇ ತಿಂಗಳ 23ರಂದು ಪುಲಿಕೇಶಿನಗರದ ಖುದೂಸ್ ಮಸೀದಿಯಲ್ಲಿ ಮುಸಲ್ಮಾನ ಬಂಧುಗಳು ಸಭೆ ಸೇರಿ ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಅವತ್ತು ಒಂದಷ್ಟು ಭದ್ರತೆ ಹಾಗೂ ಸಭೆಗೆ ಬರುವವರಿಗೆ ಅನುಕೂಲವಾಗುವಂತೆ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
Advertisement
ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳಿಗೆ ಅವಕಾಶ ಕೊಡಬೇಕೋ, ಬೇಡಮೋ ಎನ್ನುವುದನ್ನು ಆಯಾ ಪ್ರದೇಶದ ಡಿಸಿಪಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಪರಿಸ್ಥಿತಿ ಕೈ ಮೀರುವ ಸಂದರ್ಭ ಬಂದರೆ, ಮತ್ತೆ 144 ಸೆಕ್ಷನ್ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
Advertisement
ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಕೇಳಿಕೆ ನೀಡಿದ್ದಾರೆ. ಅಂಥವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.