ಬೆಂಗಳೂರು: ಲಾಕ್‍ಡೌನ್ ಕಾರಣದಿಂದ ನಗರದಲ್ಲೇ ಉಳಿದಿರುವ ಬಿಹಾರ ರಾಜ್ಯದ ಜನರನ್ನು ಸ್ವ-ಸ್ಥಳಕ್ಕೆ ತಲುಪಿಸಲು ಸರ್ಕಾರ ಪ್ರಯತ್ನಿಸಿದೆ. ಆದರೆ ತಮ್ಮೂರಿಗೆ ತೆರಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಗರಂ ಆಗಿರುವ ಕಾರ್ಮಿಕರು ಪೊಲೀಸ ವಿರುದ್ಧ ಕಲ್ಲುತೂರಾಟ ನಡೆಸಿದ್ದಾರೆ.
ನಗರದ ವಿವಿಧ ಪ್ರದೇಶಗಳಿಂದ ಇಂದು ಬೆಳಗ್ಗೆ ತಮ್ಮ ಊರಿಗೆ ತೆರಳಲು ಹಲವು ಬಿಹಾರ ರಾಜ್ಯದ ಜನರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಆಗಮಿಸಿದ್ದರು. ಆದರೆ ಬಿಹಾರಕ್ಕೆ ತೆರಳಲು ಸರಿಯಾದ ರೈಲ್ವೆ ವ್ಯವಸ್ಥೆ ಸಿಗದ ಕಾರಣ ಇತ್ತಿಂದ ಅತ್ತ, ಅತ್ತಿಂದ ಇತ್ತ ಅಲೆಯುತ್ತಿದ್ದರು. ಪರಿಣಾಮ ಎಲ್ಲರನ್ನೂ ಬಸ್‍ಗಳಲ್ಲಿ ತುಂಬಿ ಬಿಇಎಸಿ ಮೈದಾನಕ್ಕೆ ಕರೆತಂದು ಬಿಡಲಾಗಿತ್ತು.
Advertisement
Advertisement
ತಮ್ಮ ಊರಿಗೆ ತೆರಳುವ ಧಾವಂತದಲ್ಲಿದ್ದ ಜನರಿಗೆ ಅದು ಸಾಧ್ಯವಾಗದೆ ಇದ್ದ ಪರಿಣಾಮ ಗಲಾಟೆ ಆರಂಭಿಸಿದ್ದರು. ಅಲ್ಲದೇ ರಸ್ತೆಯಲ್ಲೇ ಮಲಗಿದ್ದರು. ಈ ವೇಳೆಗೆ ಅಸಮಾಧಾನಿತರನ್ನು ಸಮಾಧಾನ ಪಡಿಸಲು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ಹಂತದಲ್ಲಿ ಬಿಹಾರಿಗಳು ಪೊಲೀಸರ ವಿರುದ್ಧ ಗರಂ ಆಗಿದ್ದು, ಪೊಲೀಸರ ವಿರುದ್ಧವೇ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪೀಣ್ಯ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೆ ಕಲ್ಲೇಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಇನ್ಸ್ ಪೆಕ್ಟರ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಘಟನೆ ನಡೆಯುತ್ತಿದಂತೆ ಮತ್ತೆ ಬಿಹಾರಿ, ಉತ್ತರ ಪ್ರದೇಶದ ಕಾರ್ಮಿಕರನ್ನು ಮತ್ತೆ ನಗರಕ್ಕೆ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಅರ್ಧದಷ್ಟು ಜನ ನಗರಕ್ಕೆ ಶಿಫ್ಟ್ ಆಗಲು ಒಪ್ಪಿದ್ದಾರೆ. ನಗರದ ಯಾವ ಯಾವ ಏರಿಯಾಗಳಿಂದ ನೆಲಮಂಗಲಕ್ಕೆ ಬಂದಿದ್ದಾರೋ ಮತ್ತೆ ಅವರನ್ನು ಅಲ್ಲಿಗೆ ಬಿಟ್ಟು ಮತ್ತೆರಡು ದಿನ ತಮ್ಮ ತಮ್ಮ ರೂಂಗಳಲ್ಲಿಯೇ ಇರುವಂತೆ ಮನವಿ ಮಾಡಲಾಗಿದೆ. ಸದ್ಯ ಬಿಎಂಟಿಸಿ ಬಸ್‍ಗಳ ಮೂಲಕ ಅವರನ್ನು ನಗರದ ಏರಿಯಾಗಳಿಗೆ ರವಾನೆ ಮಾಡುವ ಸಿದ್ಧತೆ ನಡೆದಿದೆ. ಇತ್ತ ನಗರದಲ್ಲಿ ಉಳಿದುಕೊಳ್ಳಲು ನೆಲೆಯಿಲ್ಲದ ಮತ್ತಷ್ಟು ಮಂದಿ ಮಾತ್ರ ಬಿಇಎಸಿ ಮೈದಾನದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
Advertisement
ಅಲ್ಲದೇ ಘಟನೆ ಕುರಿತು ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಆರ್.ಅಶೋಕ್ ಅವರು ಕಾರ್ಮಿಕರಿಗೆ ನಾವು ವ್ಯವಸ್ಥೆ ಮಾಡಿ ಅವರ ಸ್ವ-ಸ್ಥಳಕ್ಕೆ ಕಳುಹಿಸಲು ಸಿದ್ಧರಿದ್ದೇವೆ. ಆದರೆ ಅಲ್ಲಿನ ಮುಖ್ಯಮಂತ್ರಿ ಇವರನ್ನು ಸ್ವೀಕರಿಸಲು ಸಿದ್ಧರಿಲ್ಲ. ಅವರು ಸಮ್ಮತಿ ಸೂಚಿಸಿದ ತಕ್ಷಣ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ. ಸದ್ಯ ಎಲ್ಲರಿಗೂ ಎರಡೆರಡು ಬಾರಿ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ರೈಲಿನ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.