ಬೆಂಗಳೂರು: ಮೈಸೂರು ದಸರಾದ (Mysuru Dasara) ವಿಜೃಂಭಣೆ ಒಂದು ಕಡೆಯಾದರೆ, ಇನ್ನೊಂದು ಕಡೆ ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ಹಬ್ಬದ ಸಮ್ಮಿಲನವಾಗಿರುವ ದಸರಾ ಹಬ್ಬವನ್ನು ಸಿಲಿಕಾನ್ ಸಿಟಿಯ (Silicon City) ಜನರು ಸಂಭ್ರಮಿಸಿ, ವಿಜೃಂಭಣೆಯಿಂದ ಆಚರಿಸಿದರು.
ನಗರದ ಹಲವು ಕಡೆಗಳಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು. ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ಆಯೋಜಿಸಿದ್ದ ದಸರಾ ಮೆರವಣಿಗೆ (Dasara Procession) ಕಳೆಗಟ್ಟಿ ಭಕ್ತರನ್ನು ಪುಳಕಿತಗೊಳಿಸಿತ್ತು. ಅಲಂಕೃತ ರಥಗಳಲ್ಲಿ ಸಾಲು ಸಾಲಾಗಿ ಬಂದ 90ಕ್ಕೂ ಹೆಚ್ಚು ಮೂರ್ತಿಗಳನ್ನು ಕಂಡು ಜನರು ಸಂಭ್ರಮಿಸಿದರು. ಶಿವಾಜಿನಗರ, ಆರ್.ಟಿ.ನಗರ, ಲಕ್ಷ್ಮೀದೇವಮ್ಮ ಬ್ಲಾಕ್, ಸಿಬಿಐ ರಸ್ತೆ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ಯಶವಂತಪುರ, ಹೆಬ್ಬಾಳ, ಗಂಗಾನಗರಗಳ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ.ನಗರದ ದಸರಾ ಮೈದಾನದತ್ತ ಸಾಗಿ ಬಂದು ಜನರನ್ನು ಆಕರ್ಷಿಸಿತು. ಹೂವಿನ ಪಲ್ಲಕ್ಕಿ, ಪೂಜಾ ಕುಣಿತ, ಕೀಲು ಕುದುರೆ, ಕರಡಿ ಮೇಳ, ಗೊರವರ ಕುಣಿತ, ಪಟ ಕುಣಿತ, ಡೊಳ್ಳು ಕುಣಿತ ಮುಂತಾದ ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು.ಇದನ್ನೂ ಓದಿ: ಸಿಎಂ ಭೇಟಿ ಹೊತ್ತಲ್ಲೇ ಬೆಳಗಾವಿಯಲ್ಲಿ ʻಭವಿಷ್ಯದ ಮುಖ್ಯಮಂತ್ರಿʼ ಬ್ಯಾನರ್ – ರಾಜಕೀಯದಲ್ಲಿ ಸಂಚಲನ
ಇನ್ನು ನಗರದ ಆಡುಗೋಡಿಯ ಪೋತಲಪ್ಪ ಮತ್ತು ಅಯ್ಯಪ್ಪ ಗಾರ್ಡನಲ್ಲಿ ದಸರಾ ಅಂಗವಾಗಿ ದುರ್ಗಾಪರಮೇಶ್ವರಿ ದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ದಸರಾ ಅಂಗವಾಗಿ ಕಳೆದ 9 ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ದೇವತಾ ಕಾರ್ಯ ನಡೆದಿದ್ದು, ಪ್ರತಿದಿನವೂ ದೇವಿಯ ಅವತಾರದಂತೆ ಪಾರಾಯಣ, ಅಲಂಕಾರ ಮಾಡಲಾಗಿತ್ತು. ಎಂಟನೇ ದಿನ ಅಷ್ಟಮಿಯಂದು ಚಿಕ್ಕಮಕ್ಕಳಿಗೆ ನವದುರ್ಗೆಯರ ಅಲಂಕಾರ ಮಾಡಿ, ಕನ್ಯೆ ಪೂಜೆ ನೆರವೇರಿಸಲಾಯಿತು. ವಿಜಯ ದಶಮಿಯ ದಿನ ದುರ್ಗಾಪರಮೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆಯೊಂದಿಗೆ ಅದ್ಧೂರಿ ದಸರಾ ಕೂಡ ಸಮಾಪ್ತಿಯಾಯಿತು. ಅಯ್ಯಪ್ಪ ಗಾರ್ಡನ ಹಲವೆಡೆ ಮೆರವಣಿಗೆ ನಡೆಯಿತು. ದೇವಿಯ ದರ್ಶನ ಪಡೆಯುವ ಭಕ್ತರು ಪುನೀತರಾದರು.
ಆಡುಗೋಡಿಯಂತೆ ಆಸ್ಟಿನ್ ಟೌನ್‌ನಲ್ಲಿಯೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆಸ್ಟಿನ್ ಟೌನ್ ಜೆಸ್ಮಾ ಮಂದಿರ ಸಮೀಪದಲ್ಲಿ ನೀಲಸಂದ್ರ, ಆನೆಪಾಳ್ಯ ಹಾಗೂ ಸುತ್ತಮುತ್ತಲಿನ ದೇವಾಲಯಗಳ ಸುಮಾರು 16ಕ್ಕೂ ಹೆಚ್ಚು ದೇವಿ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಹೊಸ ರೋಡ್‌ವರೆಗೂ ಸಾಗಿದ್ದು, ಒಟ್ಟಿನಲ್ಲಿ ಮೈಸೂರು ದಸರಾ ರೀತಿ ಬೆಂಗಳೂರಿನಲ್ಲಿಯೂ ಹಲವು ಕಡೆ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.ಇದನ್ನೂ ಓದಿ: ಬಾಲಕನ ತಲೆಯ ಮೇಲೆ ಹರಿದ ಟಾಟಾ ಏಸ್ – ಸ್ಥಳದಲ್ಲೇ ಸಾವು