– 500 ಕಾರ್ಮಿಕರಿಗೆ ಸಿಹಿ ಪೊಂಗಲ್
ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪೌರಕಾರ್ಮಿಕರಿಗಾಗಿ ಸಂಕ್ರಾಂತಿ ಸಂಭ್ರಮ ಏರ್ಪಡಿಸಲಾಗಿತ್ತು. ನಗರದ ಸ್ವಚ್ಛತಾ ರಾಯಭಾರಿಗಳಾದ ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲದ ಜೊತೆಗೆ, ಸೀರೆ, ಬ್ಲೌಸ್, ಪ್ಯಾಂಟ್ ಶರ್ಟ್ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.
ಪ್ರತಿನಿತ್ಯ ಮನೆಗಳಿಂದ ಕಸ ಕೊಂಡೊಯ್ಯುವ, ಬೀದಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ರೂವಾರಿಗಳಾದ ಪೌರಕಾರ್ಮಿಕರನ್ನು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ವಿಶೇಷವಾಗಿತ್ತು.
Advertisement
ಜೆಪಿ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 500 ಕಾರ್ಮಿಕರಿಗೆ ಪೊಂಗಲ್ ತಯಾರಿಸಿ ಹಂಚಲಾಯಿತು. ಪೌರ ಕಾರ್ಮಿಕರು ಸಿಹಿ, ಎಳ್ಳು-ಬೆಲ್ಲ, ಕಬ್ಬು ಸ್ವೀಕರಿಸಿದರು. ಇಷ್ಟು ವರ್ಷಗಳಿಂದ ನಮ್ಮನ್ನು ಯಾರೂ ಕರೆದು ಗೌರವಿಸಿರಲಿಲ್ಲ. ನಮಗೆ ಹಬ್ಬದ ಸಿಹಿಯ ಜೊತೆಗೆ ಉಡುಗೊರೆಗಳನ್ನು ಸಹ ನೀಡಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
Advertisement
ಇದೇ ವೇಳೆ ಮಾಜಿ ಸಚಿವ, ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ಸಂಕ್ರಾಂತಿ ಸಂತಸದ ಹಬ್ಬ. ಹೊಸ ವರ್ಷದ ಹೊಸ್ತಿಲಲ್ಲಿ ಬರುವ ಸಂಕ್ರಾಂತಿ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಸುಂದರ, ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪಾತ್ರ ಅನನ್ಯ. ಸದಾ ಕಾಲ ಸ್ವಚ್ಛತೆ ಕೈಗೊಳ್ಳುವ ನಿಮಗೂ ಖುಷಿ ಸಿಗಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶುಚಿತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮ್ಮ ಸಹಕಾರ ಅಗತ್ಯ. ನಿಮ್ಮ ಸುರಕ್ಷತೆ, ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಪಾಲಿಕೆ ಬದ್ಧವಾಗಿದೆ. ಹಳ್ಳಿಯ ನೆನಪು ತರುವ ಸಡಗರದ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕು ತರಲಿ ಎಂದು ಹಾರೈಸಿದರು.
Advertisement
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಸದಾ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಿಮ್ಮ ಜೊತೆ ಸಂಕ್ರಾಂತಿ ಆಚರಿಸುವುದು ಅರ್ಥಪೂರ್ಣವಾಗಿದೆ. ಎಲ್ಲರಿಗಿಂತ ನಿಮಗೆ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡಿದರೆ ಅದು ಸಾರ್ಥಕತೆ ಪಡೆಯುತ್ತದೆ. ಜಯನಗರ ಅತ್ಯಂತ ಶುಚಿ ಸ್ಥಳವಾಗಬೇಕು. ಸ್ವಚ್ಛ ಭಾರತದಲ್ಲಿ ಉತ್ತಮ ಹೆಸರು ಪಡೆಯಬೇಕು. ಕಸದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಯಾವುದೇ ರೀತಿಯ ಸಹಕಾರ ಬೇಕಾದರೂ ನೀಡುತ್ತೇವೆ. ಕಸ ವಿಂಗಡಣೆ ಇನ್ನಷ್ಟು ಸುಧಾರಿಸಬೇಕು. ಇದರ ಸಂಪೂರ್ಣ ಉಸ್ತುವಾರಿಯನ್ನು ತಾವೇ ವಹಿಸಿರುವುದಾಗಿ ಹೇಳಿದರು.
ಏಳು ವಾರ್ಡ್ ಗಳ ಸುಮಾರು 5000 ಜನ ಪೌರ ಕಾರ್ಮಿಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪಾಲಿಕೆ ಸದಸ್ಯರಾದ ನಾಗರಾಜ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಭಾಗಿಯಾಗಿದ್ದ ಕಾರ್ಯಕ್ರಮವನ್ನು ಬಾಂಧವ ತಂಡದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.