ಬೆಂಗಳೂರು: ಒಂದು ಕಡೆ ನಗರದ (Bengaluru) ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ. ಇನ್ನೊಂದೆಡೆ ಅರಮನೆ ಮೈದಾನದ ಜಾಗದ (Palace TDR Controversy) ಟಿಡಿಆರ್ ಸಮಸ್ಯೆ. ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಸರ್ಕಾರ ಈಗ ಪ್ರಾಜೆಕ್ಟ್ ಕೈ ಬಿಡುವುದಾಗಿ ಹೇಳಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ನಿಜವಾಗಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಸಹ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ಸರ್ಕಾರ ಪರ್ಯಾಯ ಯೋಜನೆ ಏನು? ಡಿಟೇಲ್ಸ್ ಇಲ್ಲಿದೆ.
ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣ ಪ್ರಾಜೆಕ್ಟ್ ಕೈ ಬಿಡುವುದರ ಸರ್ಕಾರ ನಿರ್ಧಾರ ಮಾಡಿರುವುದನ್ನ ಸಿಎಂ ಒಪ್ಪಿಕೊಂಡಿದ್ದಾರೆ. ಟಿಡಿಆರ್ ಕಾರಣಕ್ಕಾಗಿ ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣ ಕೈಬಿಟ್ಟ ಸರ್ಕಾರದ ತೀರ್ಮಾನದ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು.
ಇದೀಗ ಬೆಂಗಳೂರಿನಲ್ಲಿ ಬಳ್ಳಾರಿ ರಸ್ತೆ ಚಾಲುಕ್ಯ ಸರ್ಕಲ್‌ನಿಂದ ಜಯಮಹಲ್ ರಸ್ತೆ (ಮೇಕ್ರಿ ಸರ್ಕಲ್) ಆಗಲೀಕರಣ ಕೈ ಬಿಟ್ಟ ಸರ್ಕಾರ, ರಸ್ತೆ ಆಗಲೀಕರಣ ಬದಲು ಸುರಂಗ ಮಾರ್ಗ ನಿರ್ಮಾಣಕ್ಕೂ ಸರ್ಕಾರ ಪ್ಲ್ಯಾನ್ ಮಾಡಿದೆ. ಅರಮನೆ ಮೈದಾನದ ಜಾಗ ಬಳಸಿಕೊಳ್ಳುವ ಬದಲು ಪರ್ಯಾಯ ಜಾಗ ಬಳಕೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಟಿಡಿಆರ್ ಕೊಡಲು ನಿರಾಕರಿಸಿ ಪರ್ಯಾಯ ಮಾರ್ಗದಲ್ಲಿ ಸುರಂಗಮಾರ್ಗಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎಂಬ ವರದಿ ಪ್ರಸಾರ ಮಾಡಿತ್ತು.
ರಸ್ತೆ ಅಗಲೀಕರಣ ಪ್ರಾಜೆಕ್ಟ್ ಕೈ ಬಿಟ್ಟ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪರ್ಯಾಯ ಯೋಜನೆ ಬಗ್ಗೆ ಮುಂದೆ ಮಾತಾಡ್ತೀವಿ, ಟಿಡಿಆರ್ ಕೊಡಲು ಆಗಲ್ಲ, ಹಾಗಾಗಿ ಪ್ರಾಜೆಕ್ಟ್ ಕೈ ಬಿಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಗ್ರೀವಾಜ್ಞೆಯಲ್ಲಿ ಟಿಡಿಆರ್ ಕೊಡಲು ಆಗಲ್ಲ ಅಂತ ಹೇಳಿದ್ದೇವೆ. ಇಲ್ಲ ಅಂದರೆ ಪ್ರಾಜೆಕ್ಟ್ ರದ್ದು ಮಾಡೋ ಬಗ್ಗೆಯೂ ಹೇಳಿದ್ದೇವೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗದಂತೆ ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 16 ವರ್ಷಗಳಿಂದಲೂ ರಸ್ತೆ ಅಗಲೀಕರಣ ಪ್ರಾಜೆಕ್ಟ್ ಜಾರಿಗೆ ತರಲು ರಾಜ್ಯ ಸರ್ಕಾರ ಸರ್ಕಸ್ ನಡೆಸುತ್ತಿದೆ. ಆದ್ರೆ ಅರಮನೆ ಮೈದಾನದ 15 ಎಕರೆ 36 ಗುಂಟೆ ಜಾಗ ಬಳಸಿಕೊಳ್ಳುವ ವಿಚಾರದಲ್ಲಿ ಜಟಾಪಟಿ ನಡೆಯುತ್ತಿತ್ತು. ಆದ್ರೀಗ ಅರಮನೆ ಜಾಗ ಬಳಸಿಕೊಳ್ಳಲು ಬರೋಬ್ಬರಿ 3 ಸಾವಿರ ಕೋಟಿ ಟಿಡಿಆರ್ ಕೊಡಬೇಕಾಗಿರುವ ಕಾರಣಕ್ಕಾಗಿ ಸರ್ಕಾರ ಈಗ ಯೋಜನೆಯನ್ನೇ ಕೈಬಿಡುವ ಹಂತಕ್ಕೆ ಹೋಗಿದೆ. ಒಟ್ಟಿನಲ್ಲಿ ರಸ್ತೆ ಅಗಲೀಕರಣದ ಬದಲು ಟನಲ್ ರೋಡ್ ಮಾಡಲು ಸರ್ಕಾರ ಪ್ಲ್ಯಾನ್ ಮಾಡಿದ್ದು, ಮುಂದಿನ ಬಜೆಟ್ ವೇಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ಯೋಜನೆ ಮುಗಿಯುವ ತನಕ ಟ್ರಾಫಿಕ್ ಬಿಸಿ ಅನುಭವಿಸಲೇಬೇಕು.