ಬೆಂಗಳೂರು: ಓಲಾ ಹತ್ತಿದ ಯುವತಿಗೆ ಡ್ರೈವರ್ ಒಬ್ಬ ನರಕಯಾತನೆ ನೀಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಯುವತಿ ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯ ಕಿಡ್ ಕ್ಯಾಸ್ಟಲ್‍ಗೆ ಹೋಗಲು ಓಲಾ ಬುಕ್ ಮಾಡಿದ್ದಾಳೆ. ಬುಕ್ ಮಾಡಿದ ಬಳಿಕ ಓಲಾ ತಡವಾಗಿ ಬಂದಿತ್ತು. ಈ ವೇಳೆ ತಡವಾಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಓಲಾ ಡ್ರೈವರ್ ಕಿರಿಕ್ ಮಾಡಿದ್ದಾನೆ.
ಇಷ್ಟರ ನಡುವೆ ಮಲ್ಲೇಶ್ ಪಾಳ್ಯದಿಂದ ಕ್ಯಾಬ್ ಹೊರಟಿದೆ. ಅಷ್ಟರಲ್ಲಿ ಡ್ರೈವರ್ ಮತ್ತೆ ಕಿರಿಕ್ ಶುರು ಮಾಡಿದ್ದ. ಮಾತಿಗೆ ಮಾತು ಬೆಳಸಿದ ಕ್ಯಾಬ್ ಡ್ರೈವರ್, ಕಾರಿನ ಡೋರ್ ಲಾಕ್ ಮಾಡಿ ಕಾರಿನಲ್ಲೇ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಹುಡುಗಿಯ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಯಾವಾಗ ಕ್ಯಾಬ್ ಡ್ರೈವರ್ ನ ಉದ್ಧಟತನ ಜಾಸ್ತಿ ಆಯ್ತೋ ಯುವತಿಗೆ ಬೇರೆ ದಾರಿ ಇಲ್ಲದೇ ಕಿರುಚಿಕೊಂಡಿದ್ದಾಳೆ. ಯುವತಿಯ ಚೀರಾಟ ಕೇಳಿಸಿಕೊಂಡ ಸಾರ್ವಜನಿಕರು ಕಾರನ್ನು ನಿಲ್ಲಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಕ್ಯಾಬ್ ಚಾಲಕನಿಗೆ ಬುದ್ಧಿವಾದ ಹೇಳಿದ್ದಾರೆ.
ಬಳಿಕ ಯುವತಿ ಕ್ಯಾಬ್‍ನ ಚಾಲಕನ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.