– ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಣಕ್ಕಿಳಿಯೋ ‘ಕೈ’ ಅಭ್ಯರ್ಥಿ ಯಾರು?
– ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅಸಮಾಧಾನ
ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಕೊಟ್ಟ ಕ್ಷೇತ್ರ ಬೆಂಗಳೂರು ಉತ್ತರ (Bengaluru North). ಇದರ ಇತಿಹಾಸ ಗಮನಿಸಿದರೆ ವಿವಿಧ ಅವಧಿಗಳಲ್ಲಿ ಕ್ಷೇತ್ರವು ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದೆ. ಬೆಂಗಳೂರು ನಗರ, ಬೆಂಗಳೂರು, ಬೆಂಗಳೂರು ಉತ್ತರ ಎಂದು ಕರೆಯಲಾಗುತ್ತಿತ್ತು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕ್ಷೇತ್ರದ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.
Advertisement
ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ (BJP) ಪಾರುಪತ್ಯ ಮೆರೆದಿದೆ. ಕಳೆದ ಎರಡು ಅವಧಿಯಿಂದ ಸದಾನಂದ ಗೌಡರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 90 ರ ದಶಕದ ಅಂತ್ಯದ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. ನಂತರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬೆಂಗಳೂರು ಉತ್ತರದಲ್ಲಿ ಮತ್ತೆ ಹಿಡಿತ ಸಾಧಿಸಲು ಕಾಂಗ್ರೆಸ್ (Congress) ಹವಣಿಸುತ್ತಿದೆ. ಅದು ಫಲ ಕೊಡುತ್ತಾ, ಇಲ್ಲವಾ ಎಂಬುದು ಈ ಸಲದ ಚುನಾವಣೆಯ ಕುತೂಹಲ. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?
Advertisement
Advertisement
ಕ್ಷೇತ್ರ ಪರಿಚಯ
ಬೆಂಗಳೂರು ಉತ್ತರವು 1951 ರಲ್ಲಿ ತನ್ನ ಮೊದಲ ಚುನಾವಣೆಗೆ ಕಣವಾಯಿತು. ಮೊದಲ ಸಂಸದರಾಗಿ ಕಾಂಗ್ರೆಸ್‌ನ ಕೇಶವ ಅಯ್ಯಂಗಾರ್ ಆಯ್ಕೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಇದೇ ಕ್ಷೇತ್ರದಿಂದ (1962, 67, 71) ಸ್ಪರ್ಧಿಸಿ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದರು. 1991 ರ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿತ್ತು. 1977 ರಿಂದ 1991 ರವರೆಗೆ ಕಾಂಗ್ರೆಸ್‌ನ ಜಾಫರ್ ಶರೀಫ್ ಸಂಸದರಾಗಿದ್ದರು. ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಜನತಾದಳದ ಸಿ.ನಾರಾಯಣಸ್ವಾಮಿ ಬ್ರೇಕ್ ಹಾಕಿದರು. 1996 ರಲ್ಲಿ ಕಾಂಗ್ರೆಸ್ ಮಣಿಸಿ ಮೊದಲ ಬಾರಿಗೆ ಜಯದ ನಗೆ ಬೀರಿದರು. ಅದಾದ ಬಳಿಕ ಮತ್ತೆ 2 ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 2004 ರಲ್ಲಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿತು. ಹೆಚ್.ಟಿ.ಸಾಂಗ್ಲಿಯಾನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಅಲ್ಲಿಂದೀಚೆಗೆ ಬೆಂಗಳೂರು ಉತ್ತರ ಬಿಜೆಪಿ ತೆಕ್ಕೆಯಲ್ಲಿದೆ. 2009 ರಲ್ಲಿ ಡಿ.ಬಿ.ಚಂದ್ರೇಗೌಡ ಗೆಲುವು ದಾಖಲಿಸಿದ್ದರು. ನಂತರ 2014 ಮತ್ತು 2019 ರ ಅವಧಿಯಲ್ಲಿ ಡಿ.ವಿ.ಸದಾನಂದ ಗೌಡ ಸಂಸದರಾಗಿ ಪಾರ್ಲಿಮೆಂಟ್ ಪ್ರತಿನಿಧಿಸಿದ್ದಾರೆ. ಇವರು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಕೆ.ಆರ್.ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ (ಎಸ್‌ಸಿ ಮೀಸಲು). ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?
ಒಟ್ಟು ಮತದಾರರ ಸಂಖ್ಯೆ
ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 31,74,098 ಇದೆ. ಅವರ ಪೈಕಿ ಪುರುಷರು 16,29,089 ಹಾಗೂ ಮಹಿಳಾ ಮತದಾರರು 15,44,415 ಇದ್ದಾರೆ. 594 ತೃತೀಯಲಿಂಗಿ ಮತದಾರರಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಡಿ.ವಿ.ಸದಾನಂದ ಗೌಡರು (D.V.Sadananda Gowda) ಸ್ಪರ್ಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಿತ್ತು. ಡಿ.ವಿ.ಸದಾನಂದ ಗೌಡರು 1,47,518 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು 2024 ರ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಗೌಡರ ವಿರುದ್ಧ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಭಾರಿ ಅಸಮಾಧಾನವಿತ್ತು. ಇತ್ತ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಒಕ್ಕಲಿಗ ಸಮುದಾಯದವರೇ ಆದ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ ಕಾರ್ಯಕರ್ತರು ಸಿಡಿದಿದ್ದರು. ಹೀಗಾಗಿ ಅಲ್ಲಿಂದ ಶೋಭಾ ಅವರನ್ನು ಬೆಂಗಳೂರು ಉತ್ತರದ ಅಭ್ಯರ್ಥಿಯಾಗಿ ಹೈಕಮಾಂಡ್ ಘೋಷಿಸಿತು. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?
ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಡಿ.ವಿ.ಸದಾನಂದ ಗೌಡರು ಪಕ್ಷದ ನಿಲುವಿಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಹೊತ್ತಿನಲ್ಲಿ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಪಕ್ಷ ಬಿಡುವ ವಿಚಾರವನ್ನು ಸದಾನಂದ ಗೌಡರೇ ಅಲ್ಲಗಳೆದಿದ್ದಾರೆ. ಆದರೂ ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಸಿಗುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಅವರು ಸದಾನಂದ ಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವರ ಪ್ರಯತ್ನ ಎಷ್ಟು ಫಲ ಕೊಡುತ್ತದೆ ಎಂಬುದು ಪ್ರಶ್ನೆಯಾಗಿದೆ.
ಇನ್ನೂ ಘೋಷಣೆಯಾಗದ ಕಾಂಗ್ರೆಸ್ ಅಭ್ಯರ್ಥಿ
ಒಕ್ಕಲಿಗರೇ ಇಲ್ಲಿ ನಿರ್ಣಾಯಕರಾಗಿರುವುದಿಂದ ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆಗೆ ನೀಡಿದರೆ ಕಾಂಗ್ರೆಸ್‌ನಲ್ಲಿ ಪ್ರೊ.ರಾಜೀವ್ ಗೌಡ (Rajeev Gowda) ಅವರಿಗೆ ನೀಡುವ ಸಾಧ್ಯತೆ ಇದೆ. ಕ್ಷೇತ್ರದಿಂದ ಸ್ಪರ್ಧಿಸುವಂತೆ ಗೋವಿಂದರಾಜನಗರ ಕ್ಷೇತ್ರ ಶಾಸಕ ಪ್ರಿಯಕೃಷ್ಣ ಅವರ ಮನವೊಲಿಸಲಾಗಿತ್ತು. ಶೋಭಾ ಕರಂದ್ಲಾಜೆಗೆ ಪ್ರಬಲ ಪೈಪೋಟಿ ಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ಪ್ರಿಯಕೃಷ್ಣ ಸ್ಪರ್ಧೆಗೆ ಒತ್ತಾಯಿಸಲಾಗಿತ್ತು. ಇತ್ತ ಪ್ರಿಯಕೃಷ್ಣ ಅವರ ತಂದೆ ಎಂ.ಕೃಷ್ಣಪ್ಪ ಅವರನ್ನು ಸಿಎಂ ಮತ್ತು ಡಿಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದರು. ಪ್ರಿಯಕೃಷ್ಣ ಸ್ಪರ್ಧಿಸಿದರೆ ಗೆಲ್ಲಿಸಿಕೊಂಡು ಬರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು. ಆದರೆ ಈಗ ರಾಜೀವ್ ಗೌಡ ಅವರಿಗೆ ಟಿಕೆಟ್ ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?
ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು- 13,51,005
ಎಸ್‌ಸಿ/ಎಸ್‌ಟಿ- 6,56,868
ಮುಸ್ಲಿಂ- 6,97,389
ಕುರುಬ- 5,47,282
ಲಿಂಗಾಯತ- 5,20,581
ಇತರೆ- 2,57,138