ಬೆಂಗಳೂರು: ವಿಧಾನಸೌಧದಲ್ಲಿ ಇಂದು ನಾನ್ ನೋಡಕ್ಕಿಲ್ಲ, ನಾನ್ ಮಾತಾಡಕ್ಕಿಲ್ಲ..!. ಈ ರೀತಿಯ ಘಟನೆ ನಡೆಯಿತು. ಸಿಎಂ ಯಡಿಯೂರಪ್ಪಗೆ ಕೋಪ ಹೆಚ್ಚಿರಬಹುದು, ರಾಜಕೀಯ ವೈರತ್ವ ಇರಬಹುದು. ಎದುರಿಗೆ ಸಿಕ್ಕಾಗ ಸ್ವಲ್ಪ ಸ್ಮೈಲ್ ಕೊಟ್ಟು ಮಾತನಾಡುವ ಸ್ವಭಾದವರು. ಆದರೆ ಇಂದು ಅವರ ಸ್ವಭಾವ ಮಾತ್ರ ಉಲ್ಟಾ ಆಗಿತ್ತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 13 ಮಂದಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಕಡೆಯವರಾಗಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆಗ ಯಡಿಯೂರಪ್ಪ ಭೇಟಿಯಾಗಿ ಆಶೀರ್ವಾದ ಪಡೆಯಲು ಸರ್ಕಸ್ ಮಾಡಿದರು. ಅಷ್ಟೊತ್ತಿಗೆ ರಾಷ್ಟ್ರಗೀತೆ ಶುರುವಾಯ್ತು. ಅದಾದ ಬಳಿಕ ಸಿಎಂ ವೇದಿಕೆ ಮೇಲೆ ಬಂದು ಎಲ್ಲರ ಜತೆ ಫೋಟೋ ಪೋಸಿಗೆ ನಿಂತರು.
ಆಗ ಶರತ್ ಬಚ್ಚೇಗೌಡ ಅವರು ವೇದಿಕೆ ಮೇಲೆ ಹೋಗಲು ಮೀನಾಮೀಷ ಎಣಿಸಿ ಕಡೆಗೂ ವೇದಿಕೆ ಹತ್ತಿ ಪೋಸು ಕೊಟ್ಟರು. ಬಳಿಕ ವೇದಿಕೆಯ ಒಂದು ಬದಿಯಿಂದ ಯಡಿಯೂರಪ್ಪ ಇಳಿದ್ರೆ, ಇನ್ನೊಂದು ಬದಿಯಿಂದ ಶರತ್ ಬಚ್ಚೇಗೌಡ ಇಳಿದು ಸಿಎಂಗೆ ಕಾದು ನಿಂತರು. ಅಷ್ಟೊತ್ತಿಗಾಗಲೇ ನೂಕುನುಗ್ಗಲು ಶುರುವಾಗಿತ್ತು. ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಲು ಶರತ್ ಯತ್ನಿಸಿದರು. ಪಕ್ಕದಲ್ಲಿ ಸಿಎಂ ಯಡಿಯೂರಪ್ಪ ಹೋದರೂ ಶರತ್ ಕಡೆ ತಿರುಗಿಯೂ ನೋಡಲಿಲ್ಲ. ಶರತ್ ಹಿಂದೆ ಸರ್.. ಸರ್.. ಎಂದರೂ ಸಿಎಂ ಹೊರಟೇ ಬಿಟ್ಟರು. ಅವರ ಹಿಂದೆ ಅಶೋಕ್ ಬಂದಾಗಲೂ ಸುಮ್ಮನೆ ನಕ್ಕು ವಿಶ್ ಮಾಡಲಿಲ್ಲ. ಆದರೂ ಶರತ್ ಬಚ್ಚೇಗೌಡ ನಕ್ಕು ಸುಮ್ಮನಾದ ಪ್ರಸಂಗ ಇಂದು ನಡೆಯಿತು. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ನೂತನ ಶಾಸಕರು
ಒಟ್ಟಾರೆ ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶರತ್ ಬಚ್ಚೇಗೌಡ ಹೆಚ್ಚು ಸೌಂಡ್ ಮಾಡಿದ್ರು. ಯಡಿಯೂರಪ್ಪ ಸಿಗಲಿಲ್ಲ ಅನ್ನೋದು ಒಂದು ಕಡೆಯಾದ್ರೆ, ಯಡಿಯೂರಪ್ಪ ಸಮ್ಮುಖದಲ್ಲೇ ಶರತ್ ಬೆಂಬಲಿಗರು ಹೆಚ್ಚು ಜೈಕಾರ ಕೂಗಿದ್ರು.