ಬೆಂಗಳೂರು: ಭರ್ಜರಿ ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಿಎಂಗೆ ಸಂಪುಟ ಪುನಾರಚನೆ ತಲೆನೋವು ಶುರುವಾಗಿದೆ. ಫಲಿತಾಂಶದ ಸಂಭ್ರಮ ಮಾಸುವ ಮುನ್ನವೇ ಸಂಪುಟ ಸೇರಲು ಶಾಸಕರು ಪೈಪೋಟಿಗೆ ಇಳಿದಿದ್ದಾರೆ.
ಸಚಿವ ಸ್ಥಾನ ಪಡೆಯಲು ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಹೊಸ ಶಾಸಕರ ಜೊತೆ ಮೂಲ ಬಿಜೆಪಿ ಶಾಸಕರು ಅಖಾಡಕ್ಕೆ ಇಳಿದಿದ್ದಾರೆ. ಸಚಿವ ಸ್ಥಾನಗಳಿಗೆ ಒಟ್ಟೊಟ್ಟಿಗೆ ಹಳಬರು, ಹೊಸಬರಿಂದ ಸಿಎಂ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆಯಿಂದಲೂ ಹೊಸ ಶಾಸಕರು ಮತ್ತು ಹಳೆಯ ಶಾಸಕರಿಂದ ಸಿಎಂ ಭೇಟಿ ನಿರಂತರವಾಗಿ ಮುಂದುವರಿದಿದೆ. ಮೂಲ ಶಾಸಕರಾದ ಉಮೇಶ್ ಕತ್ತಿ, ಎಸ್ ಎ ರಾಮದಾಸ್, ಮುರುಗೇಶ್ ನಿರಾಣಿ, ರಾಜುಗೌಡ, ದತ್ತಾತ್ರೇಯ ಪಾಟೀಲ ರೇವೂರ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ಪೂರ್ಣಿಮಾ ಶ್ರೀನಿವಾಸ್, ಎಸ್ ಆರ್ ವಿಶ್ವನಾಥ್, ಸತೀಶ್ ರೆಡ್ಡಿ, ಮಾಡಾಳ್ ವೀರೂಪಾಕ್ಷಪ್ಪ, ಸುಭಾಷ್ ಗುತ್ತೇದಾರ್, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸೇರಿ ಹಲವರು ಸಚಿವ ಸ್ಥಾನಕ್ಕೆ ಒತ್ತಡ ಹೇರಲಾರಂಭಿದ್ದಾರೆ ಎನ್ನಲಾಗಿದೆ.
ಗೊಂದಲ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಟೆನ್ಷನ್ ಕೂಡ ಹೆಚ್ಚಾಗುತ್ತಿದೆ. ಗೊಂದಲ ನಿವಾರಣೆ ಹೇಗೆಂಬ ಆತಂಕದಲ್ಲಿ ಸಿಎಂ ಇದ್ದು, ಹೈಕಮಾಂಡ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಎಂ ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟ ನೂತನ ಶಾಸಕರು
ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಬಳಿ ಸಿಎಂ ಚರ್ಚಿಸಲಿದ್ದು ಗೊಂದಲ, ಅಸಮಾಧಾನ ಬಗೆಹರಿಸಲಿದ್ದಾರೆ. ಆದರೆ ಈ ಸಲವೂ ಸಚಿವ ಸ್ಥಾನ ಸಿಗದಿದ್ದರೆ ಪಕ್ಷದ ಮೂಲ ಶಾಸಕರ ನಡೆ ಹೇಗಿರಬಹುದೆಂಬ ಕುತೂಹಲವೂ ಹುಟ್ಟಿದೆ. ಒಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ಪುನಾರಚನೆ ಸರ್ಕಸ್ ಮಾಡಿ ಮುಗಿಸಲು ಸಿಎಂ ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.