ಬೆಂಗಳೂರು: ಲಾಕ್‍ಡೌನ್ ಆದೇಶದ ನಂತರ ಸರ್ಕಾರ ಘೋಷಣೆ ಮಾಡಿದ ಎರಡು ತಿಂಗಳ ಪಡಿತರವನ್ನು ನೀಡಲು ತಾಲೂಕು ಆಡಳಿತ ತಯಾರಿ ನಡೆಸಿದ್ದು, ಪಡಿತರ ಚೀಟಿ ಹೊಂದಿದ ಎಲ್ಲರಿಗೂ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಎಂ. ಶ್ರೀನಿವಾಸಯ್ಯ ತಿಳಿಸಿದರು.
ನೆಲಮಂಗಲ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 2ರಿಂದ ತಾಲೂಕಿನ ತರಕಾರಿ ಮಾರಾಟಗಾರರಿಗೆ ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಹಾಗೂ ದಿನಸಿಯ ಚಿಲ್ಲರೆ ವ್ಯಾಪಾರಿಗಳಿಗೆ 7ರಿಂದ 2 ಗಂಟೆಯವರೆಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಸಮಯದಲ್ಲಿ ಮಾತ್ರ ವ್ಯಾಪಾರ ವಹಿವಾಟು ನಡೆಸಬೇಕು. ಅದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ನಿಯಮ ಮೀರಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಹಾಗೂ ಅಂಗಡಿ ಲಾಕ್ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisement
Advertisement
ಪಡಿತರ ವಿತರಣೆಗೆ ವ್ಯವಸ್ಥೆ:
ಪಡಿತರ ಚೀಟಿ ಹೊಂದಿರುವವರು ಹೆಬ್ಬೆಟ್ಟಿನ ಗುರುತನ್ನು ನೀಡುವ ಅವಶ್ಯಕತೆಯಿಲ್ಲ. ನಿಮ್ಮ ಮೊಬೈಲ್‍ಗೆ ಬರುವ ಒಟಿಪಿ ನೀಡಿದರೆ ಸಾಕು. ಒಟಿಪಿ ಬರದಿದ್ದರೆ ನಿಮ್ಮ ಮೊಬೈಲ್ ನಂಬರ್ ಬದಲಿಸುವ ಮೂಲಕ ಆ ಮೊಬೈಲ್ ನಂಬರ್ ನಲ್ಲಿ ಒಟಿಪಿ ಪಡೆಯಬಹುದಾಗಿದೆ. ಒಟಿಪಿ ಸಮಸ್ಯೆಯಾದರೆ ಖಚಿತ ಮಾಹಿತಿ ಮೇರೆಗೆ ಪಡಿತರ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಗೋಧಿ, ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
Advertisement
Advertisement
630 ಮಂದಿಗೆ ಊಟ:
ತಾಲೂಕಿನ ಕೂಲಿ ಕಾರ್ಮಿಕರು ಹಾಗೂ ಸಂಚರಿಸುವ ಅಲೆಮಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಬೆಳಗ್ಗೆ 630 ಮಂದಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಊಟದ ಅನಿವಾರ್ಯವಿರುವವರು 080-27722126 ನಂಬರ್ ಗೆ ಕರೆ ಮಾಡಿದರೆ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಇಓ ರಮೇಶ್, ವೃತ್ತನಿರೀಕ್ಷಕ ಶಿವಣ್ಣ, ಸಬ್‌ಇನ್ಸ್‌ಪೆಕ್ಟರ್ ಡಿ.ಆರ್ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿದೇರ್ಶಕ ಶಿವಕುಮಾರ್, ಶಿರಸ್ಥೇದ್ದಾರ್ ಮಂಜುನಾಥ್, ಶ್ರೀನಿವಾಸಮೂರ್ತಿ, ನಗರಸಭೆ ಆರೋಗ್ಯಾಧಿಕಾರಿ ಬಸವರಾಜು ಮತ್ತಿತರು ಉಪಸ್ಥಿತರಿದ್ದರು.