ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಲು ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ನಿರ್ಧಾರ ಮಾಡಿದೆ.
ಪ್ರತಿ ಲೀಟರಿಗೆ ಎರಡು ರೂ. ಏರಿಕೆ ಮಾಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ. ಹೊಸ ದರ ಫೆಬ್ರವರಿ 1 ರಿಂದ ಜಾರಿಯಾಗಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ 2 ರೂ. ದರ ಏರಿಕೆಯಿಂದ ಬರುವ ಹಣದಲ್ಲಿ 1 ರೂ. ರೈತರಿಗೆ ನೀಡಲು ಸರ್ಕಾರ ತೀರ್ಮಾನ ಮಾಡಿದ್ದು, ರಾಜ್ಯ ರೈತರಿಗೆ ಶುಭ ಸುದ್ದಿ ಕೊಟ್ಟಿದೆ.
Advertisement
Advertisement
ಬೆಲೆ ಏರಿಕೆ ಇಂದ ಬರುವ 2 ರೂ. ಲಾಭದಲ್ಲಿ 1 ರೂ. ರೈತರಿಗೆ ಕೊಟ್ಟು, ಉಳಿದ ಒಂದು ರೂ. ಅನ್ನು ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ದರ ಏರಿಕೆಯಿಂದ ಲಭಿಸಿದ 1 ರೂಪಾಯಿಯಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್‍ಗಳಿಗೆ ಕಮಿಷನ್ ಮತ್ತು ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ ಎನ್ನಲಾಗಿದೆ.
Advertisement
ಬೆಲೆ ಏರಿಕೆ ವಿಚಾರವಾಗಿ ಇತ್ತೀಚೆಗೆ ಕೆ.ಎಂ.ಎಫ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಮೂರು ರೂ. ಜಾಸ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಮೂರು ರೂ. ಹೆಚ್ಚಳ ಮಾಡಲು ಒಪ್ಪದ ಸರ್ಕಾರ ಎರಡು ರೂ. ಏರಿಕೆ ಮಾಡಲು ಹಸಿರು ನಿಶಾನೆ ತೋರಿದೆ.