– 3 ಹನುಮನ ಮಂದಿರದ ಮೇಲೆ ಮೆಟ್ರೋ ಸವಾರಿ
ಬೆಂಗಳೂರು: ಪವನ ಪುತ್ರ ಹನುಮಂತ ಭಕ್ತರಿಗೆ ದರ್ಶನ ನೀಡುತ್ತಾ ಶಾಂತವಾಗಿ ನೆಲೆಸಿದ್ದನು. ಭಕ್ತರು ಕೂಡ 150 ವರ್ಷಗಳಿಂದ ಈ ಆಂಜನೇಯನನ್ನ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಹನುಮಂತನಿಗೆ ಮೆಟ್ರೋ ಕಂಟಕ ಎದುರಾಗಿದೆ.
ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ಮೆಟ್ರೋ ಟ್ರೈನ್ ಟ್ರ್ಯಾಕ್‍ಗೆ ಇಳಿಸೋ ಧಾವಂತದಲ್ಲಿ ನಮ್ಮ ಮೆಟ್ರೋ ನಿಗಮ ಇದೆ. ಆದರೆ ಮೆಟ್ರೋ ವೇಗಕ್ಕೆ ಭಜರಂಗಿ ತಡೆಯೊಡ್ಡಿದ್ದಾನೆ. ಹೀಗಾಗಿ ಆಂಜನೇಯನ ಗುಡಿಯ ಮೇಲೆಯೇ ಮೆಟ್ರೋ ಸವಾರಿ ಮಾಡಲು ತಯಾರಿ ನಡೆಸಿದೆ. ಗಾರ್ವೇಭಾವಿಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಮೂರು ಆಂಜನೇಯನ ಸನ್ನಿಧಿಗಳಿವೆ. ಈ ಮೂರು ಆಂಜನೇಯನ ಗುಡಿಯನ್ನ ಕೆಡವಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಈಗ ಸ್ಕೆಚ್ ಹಾಕಿದೆ ಎಂದು ಅರ್ಚಕ ವಿಠಲ್ ರಾಜ್ ಆರೋಪಿಸಿದ್ದಾರೆ.
ಗಾರ್ವೇಭಾವಿಪಾಳ್ಯದಲ್ಲಿರೋ ಆಂಜನೇಯನ ಗುಡಿ ಅತ್ಯಂತ ಪುರಾತನವಾಗಿದ್ದು, ಸರಿಸುಮಾರು 150 ವರ್ಷದಷ್ಟು ಹಳೆಯದು ಎನ್ನಲಾಗುತ್ತಿದೆ. ಅಲ್ಲದೆ ಈ ಹಿಂದೆ ಮೆಟ್ರೋ ಪ್ಲಾನ್ ಪ್ರಕಾರ ಗುಡಿ ತೆರವು ಮಾಡುವುದಿಲ್ಲ ಎಂದು ಮೆಟ್ರೋ ಅಭಯ ನೀಡಿತ್ತು. ಆದರೆ ಇದೀಗ ಏಕಾಏಕಿ ದೇವಸ್ಥಾನ ತೆರವಿಗೆ ಮುಂದಾಗಿರೋ ಮೆಟ್ರೋ ಕ್ರಮವನ್ನ ಭಕ್ತರು ಸೇರಿ ದೇವಸ್ಥಾನ ಆಡಳಿತ ಮಂಡಳಿ ಖಂಡಿಸಿದೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡೋದಿಲ್ಲ ಎಂದು ಭಕ್ತಾದಿಗಳು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಈ ಮಾರ್ಗದ ಟ್ರಾಫಿಕ್ ನಿಯಂತ್ರಿಸಲು ಮೆಟ್ರೋ ಅನಿವಾರ್ಯ. ಆದರೆ ಈಗ ಅನಾದಿಕಾಲದಿಂದಲೂ ಜನರು ಪೂಜಿಸಿಕೊಂಡು ಬಂದ ಗುಡಿ ತೆರವು ಮಾಡೋಕೆ ಮುಂದಾಗಿರೋದು ವಿವಾದಕ್ಕೆ ಕಾರಣವಾಗಿದೆ. ಈ ವಿವಾದದಲ್ಲಿ ಆಂಜನೇಯನ ಭಕ್ತರು ಗೆಲ್ತಾರಾ ಇಲ್ಲ, ಹನುಮನ ಗುಡಿಯ ಮೇಲೆ ಮೆಟ್ರೋ ಸವಾರಿ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.