ಬೆಂಗಳೂರು: ಇತ್ತೀಚೆಗಷ್ಟೇ ಮೇಖ್ರಿ ಸರ್ಕಲ್ ಬಳಿ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಬೆಂಟ್ಲಿ ಕಾರು ಅಪಘಾತ ಮಾಡಿತ್ತು. ಈ ಘಟನೆ ಮಾಸೋ ಮುನ್ನವೇ ನಲಪಾಡ್ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಈ ಬಾರಿ ಆರೋಪ ಮಾಡುತ್ತಿರುವುದು ಬೇರಾರು ಅಲ್ಲ, ನಲಪಾಡ್ ಪಕ್ಷದ ಕೈ ಕಾರ್ಯಕರ್ತರೇ ಈ ಆರೋಪ ಮಾಡಿದ್ದಾರೆ. ನಲಪಾಡ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಭಾನುವಾರ ಸಂಜೆ ವೈಯ್ಯಾಲಿಕಾವಲ್ ತೆಲುಗು ಭವನದಲ್ಲಿ ಕೈ ಕಾರ್ಯಕರ್ತರಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಕೈ ಶಾಸಕ ಬಿ.ನಾರಾಯಣ ರವರ ಪುತ್ರ ಗೌತಮ್, ನಲಪಾಡ್ ಸೇರಿದಂತೆ ಯೂತ್ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾಗಿಯಾಗಿದ್ದರು.
Advertisement
Advertisement
ಈ ವೇಳೆ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಪುತ್ರ ಗೌತಮ್ ಅವರಿಗೆ ವೇದಿಕೆ ಮೇಲೆ ಅವಕಾಶ ನೀಡಿರಲಿಲ್ಲವಂತೆ. ಇದನ್ನು ಸಚಿನ್ ಎಂಬಾತ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾನೆ. ಇದನ್ನೆಲ್ಲ ಪ್ರಶ್ನಿಸಲು ನೀನ್ಯಾರು ಎಂದು ಶಿವಕುಮಾರ್ ಸಚಿನ್‍ಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಅಲ್ಲೆ ಇದ್ದ ನಲಪಾಡ್ ಹಾಗೂ ಆತನ ಗನ್ ಮ್ಯಾನ್ ಏಕಾಏಕಿ ಸಚಿನ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.
Advertisement
Advertisement
ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ನಲಪಾಡ್, ಭಾನುವಾರ ನಡೆದ ಭಾಷಣ ಕಾರ್ಯಕ್ರಮದಲ್ಲಿ ನಾನು ಮತ್ತು ಸಚಿನ್ ಇಬ್ಬರು ಭಾಗವಹಿಸಿದ್ದೆವು. ಇಬ್ಬರು ಕೂಡ ಗೆದ್ದಿರಲಿಲ್ಲ. ಸಚಿನ್ ಜೊತೆಗಿದ್ದ ಗೌತಮ್‍ರನ್ನ ವೇದಿಕೆ ಮೇಲೆ ಕರೆದಿಲ್ಲ ಎಂದು ಅವರೇ ಕಿರಿಕ್ ಶುರು ಮಾಡಿದರು. ಈ ವೇಳೆ ನಾನು ಮಧ್ಯ ಪ್ರವೇಶಿಸಿದ್ದಕ್ಕೆ ನಿನಗೂ ಇದಕ್ಕೂ ಸಂಬಂಧವಿಲ್ಲ ಎಂದು ನನ್ನ ಮೇಲೆಯೆ ಗಲಾಟೆ ಮಾಡಿದರು ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿರುವ ನಲಪಾಡ್, ಸಚಿನ್ ವಿರುದ್ಧ ವೈಯ್ಯಾಲಿಕಾವಲ್ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ.
ಸದ್ಯ ನಲಪಾಡ್ ಹಾಗೂ ಸಚಿನ್ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆ ಮಾಡಿ ಪುಂಡಾಟ ಮೆರೆದಿದ್ದು ಯಾರು ಎಂಬುವುದನ್ನು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.